Thursday, 8 June 2023

 "ಮುಟ್ಟಿನ ಕಪ್, ಮಹಿಳಾ ಆರೋಗ್ಯ ಮತ್ತು ಪರಿಸರ ಸಂರಕ್ಷಣೆ"

ಪರಿಸರ ದಿನದ ಪ್ರಯುಕ್ತ ಈ ಬಾರಿ ಕ್ರಿಯಾ ವತಿಯಿಂದ ಸಾಂಪ್ರದಾಯಿಕ ನೆಲೆಯಿಂದ ವಿಭಿನ್ನ ಪರಿಸರ ಚಟುವಟಿಕೆಗಳೆಡೆ ಹೊರಳಬೇಕೆಂದುಕೊಂಡಾಗ ಪರಿಸರ ಸ್ನೇಹಿ ಋತುಚಕ್ರ ನೈರ್ಮಲ್ಯೀಕರಣದ ಕಡೆ ಗಮನ ಹೋಯಿತು. ಕನಿಷ್ಠ 2000 ಯುವತಿಯರು/ಮಹಿಳೆಯರಿಗೆ ಈ ಪರಿಸರ ಸ್ನೇಹಿ ಋತುಚಕ್ರದ ನೈರ್ಮಲ್ಯೀಕರಣದ ಕುರಿತಾಗಿ ಕಾರ್ಯಾಗಾರಗಳನ್ನು ನಡೆಸುವುದು ಎಂದು ತೀರ್ಮಾನವಾಯಿತು. ಈ‌ ಹಿಂದೆ‌ ವರ್ಚುವಲ್ ಮಾಧ್ಯಮದ ಮೂಲಕ "ಮುಟ್ಟಿನ ಕಪ್ ಮತ್ತು ಮಹಿಳಾ ಆರೋಗ್ಯ" ಎನ್ನುವ ವಿಷಯದ ಬಗ್ಗೆ ಸಂವಾದ ಆಯೋಜಿಸಿದ್ದಾಗ ಈ ಕುರಿತು ಅನೇಕ ಮಹಿಳೆಯರು ಮತ್ತು ವೈದ್ಯರು ಇದನ್ನು‌ ಮುಖಾಮುಖಿ ಸಂವಾದ ಏರ್ಪಡಿಸುವ ಮೂಲಕ ದೊಡ್ಡ ಸಂಖ್ಯೆಯ ಮಹಿಳೆಯರಿಗೆ ತಲುಪಿಸಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದರಂತೆ ಈ‌ ವಿಷಯದ‌ ಜೊತೆ ಪರಿಸರ ಸಂರಕ್ಷಣೆಯನ್ನೂ ಸೇರಿಸಿಕೊಂಡು ಸಮಾಜಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮಹಿಳಾ  ವಿದ್ಯಾರ್ಥಿನಿಲಯಗಳು ಹಾಗೂ ಉಳಿದಂತೆ  ಕಾಲೇಜುಗಳನ್ನು ಆಯ್ಕೆ ಮಾಡಿ ಅಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಿ ಆಸಕ್ತ ಮೂರು-ನಾಲ್ಕು ಜನ ಸ್ತ್ರೀರೋಗ ತಜ್ಞರನ್ನು ಕೋರಲಾಯಿತು. ಅದರ ಫಲ ಮೊನ್ನೆ ಮೈಸೂರಿನ ಒಂದು ಹಾಸ್ಟೆಲ್ ನ 250 ಮಂದಿ ಯುವತಿಯರಿಗೆ "ಮುಟ್ಟಿನ ಕಪ್ ಬಳಕೆ, ಮಹಿಳಾ ಆರೋಗ್ಯ ಹಾಗೂ ಪರಿಸರ ಸಂರಕ್ಷಣೆ" ಎನ್ನುವ ವಿಷಯದ ಮೇಲೆ ಸಂವಾದ ಏರ್ಪಡಿಸಲಾಗಿತ್ತು. ಆರಂಭದಲ್ಲಿ ಪ್ಯಾಸಿವ್ ಆಗಿ ಆಲಿಸುತ್ತಾ ಹೋದ ಹುಡುಗಿಯರು ನಂತರದಲ್ಲಿ ಮುಕ್ತವಾಗಿ ಸಂವಾದಿಸಿದ ರೀತಿ ನೋಡಿ ಇಂಥಾದ್ದೊಂದು ವಿಷಯ ಆಯ್ಕೆ ಮಾಡಿಕೊಂಡಿದ್ದಕ್ಕೆ ಹೆಮ್ಮೆಯೆನಿಸಿತು.

ಸಾಂಪ್ರದಾಯಿಕ ಋತುಚಕ್ರದ ನೈರ್ಮಲ್ಯೀಕರಣ ಮಾದರಿಗಳ ಚೌಕಟ್ಟನ್ನು ಬಿಟ್ಟುಬರಲು ಇಂದು ಅನೇಕ ಕಾರಣಗಳಿವೆ ಎಂಬುದನ್ನು ಹಲವಾರು ಮಹಿಳೆಯರು ಕಂಡುಕೊಂಡಿದ್ದಾರೆ. ಸಧ್ಯಕ್ಕೆ ಆಧುನಿಕ ಮತ್ತು ಪರಿಸರ ಸ್ನೇಹಿ ಪರ್ಯಾಯಗಳನ್ನು ಕಂಡುಕೊಳ್ಳುವುದು ಹೆಚ್ಚು ಸಮರ್ಥನೀಯ ಅನ್ನಿಸುತ್ತಿದೆ. ಇಂತಹ ಆಯ್ಕೆಗಳ ಬಗ್ಗೆ ಅನೇಕ ಸಂಶಯಗಳು‌ ಇದ್ದರೂ ಮಹಿಳೆಯರು ಉತ್ಸುಕರಾಗಿರುವುದಂತು ಸತ್ಯ.‌ ಮುಟ್ಟಿನ ಕಪ್ ಗಳು ಪರಿಸರ‌ ಸ್ನೇಹಿಯಾಗಿದ್ದು‌ ಇವುಗಳ ಬಳಕೆಯಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವಂಥದ್ದಾಗಿದೆ. ಓರ್ವ ಮಹಿಳೆ‌ ತನ್ನ ಜೀವಮಾನದ ಋತುಚಕ್ರದ ಅವಧಿಯಲ್ಲಿ ಸರಿ‌ ಸುಮಾರು 9000 ದಿಂದ 9500 ಪ್ಯಾಡ್/ ಟ್ಯಾಂಪೂನ್‌ಗಳನ್ನು ಬಳಸುತ್ತಾಳೆ ಎನ್ನುವ ಅಂದಾಜಿದೆ. ಇದರಿಂದಾಗಿ ಭಾರತದಲ್ಲಿ ವಾರ್ಷಿಕ 1.13 ಲಕ್ಷ ಕಿಲೋ ಗ್ರಾಂ ನಷ್ಟು Menustrual waste ಸೃಷ್ಟಿಯಾಗಿ‌ ಅದರ‌ ಸಮರ್ಪಕ ನಿರ್ವಹಣೆ ಇಲ್ಲದೆ ಪರಿಸರ‌ ಸೇರುತ್ತಿದೆ. ಇದಕ್ಕೆ ಬಳಕೆಯಾಗುವ ಟನ್ನುಗಟ್ಟಲೆ ಹತ್ತಿ ಕೂಡ ಅಂತಿಮವಾಗಿ ವ್ಯರ್ಥ‌ ಅನ್ನುವ ಮಾತೂ‌ ಇದೆ. ಹೆಚ್ಚಿನ ಪ್ಯಾಡ್‌ಗಳು ಪಾಲಿಥಿಲೀನ್ ಪ್ಲಾಸ್ಟಿಕ್ ಅನ್ನು ಹೊಂದಿದ್ದು  ಇದಂತೂ ಪರಿಸರಕ್ಕೆ ಹಾನಿಕಾರಕವಾಗಿದೆ. ಹಾಗೆಯೆ ಬಹುತೇಕ ಪ್ಯಾಡ್ ಗಳಲ್ಲಿ ಅಜೈವಿಕ ಹತ್ತಿ ಬಳಸುವುದರಿಂದ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳು‌ ಕೂಡ ಹೆಚ್ಚು ಎನ್ನಲಾಗುತ್ತಿದೆ. ಇದೆಲ್ಲದರ ಜೊತೆಗೆ ಇದು ಆರ್ಥಿಕವಾಗಿ ದುಬಾರಿಯಾಗಿದ್ದು ಬಡ ಮಹಿಳೆಯರು ಇದರ‌ ಹೊರೆ ಹೊರುವುದು ಕಷ್ಟಸಾಧ್ಯ ಕೂಡ ಅನ್ನುವ ಅಭಿಪ್ರಾಯ ಇದೆ. ಇದರ ಬಳಕೆಯಿಂದ ಮುಟ್ಟಿನ ಕಪ್ ಗೆ ಹೋಲಿಸಿದರೆ ಆರೋಗ್ಯ ಸಂಕೀರ್ಣತೆಗಳೂ‌ ಹೆಚ್ಚು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ.

ಇಂಥಹುದೆಲ್ಲವನ್ನೂ ಉಪನ್ಯಾಸ-ಸಂವಾದದ ಮೂಲಕ ತಿಳಿಸಿಕೊಡುವ ಒಂದು ಪ್ರಯತ್ನವಾಗಿ ನಮ್ಮ ಕ್ರಿಯಾದ "ನಾನು ಸ್ತ್ರೀ" ತಂಡ ಕಾರ್ಯ‌ನಿರ್ವಹಿಸುತ್ತಿದೆ. ಈ ತಂಡ  ತಲುಪಲಿರುವ ಅಷ್ಟೂ ಮಂದಿಯಲ್ಲಿ ಶೇ 10 ರಷ್ಟು‌ ಜನವಾದರೂ ಇವುಗಳನ್ನು ಬಳಸಲು ಮನಸ್ಸು ಮಾಡಿದರೆ ಇವರೆಲ್ಲರ ಶ್ರಮ ಸಾರ್ಥಕ. ಆದರೇ‌ ಮೋದಲನೆ ಸೆಷನ್‌ನಲ್ಲಿ‌ ಸಿಕ್ಕ ಪ್ರತಿಕ್ರಿಯೆ ಇಂತಹ ಪ್ರಯತ್ನಗಳ ಮೇಲೆ ನಂಬಿಕೆ ಇಡಬಹುದು ಎನ್ನುವಂತಾಗಿದೆ.


Wednesday, 4 May 2022

ಆಂಟಿ, ಅಂಕಲ್, ಅಜ್ಜಿ ಸಂಬೋಧನೆಯ ಹಿಂದಿನ‌ (ಏಜ್ ಹೈಡಿಂಗ್) ಹಿಪೋಕ್ರಸಿ!

ಆಂಟಿ, ಅಂಕಲ್, ಅಜ್ಜಿ ಸಂಬೋಧನೆಯ ಹಿಂದಿನ‌ (ಏಜ್ ಹೈಡಿಂಗ್)  ಹಿಪೋಕ್ರಸಿ!


ಅಜ್ಜಿ‌ ಈಗ ಬಂದ್ರಾ, ಚೆನ್ನಾಗಿದೀರಾ?

ಹಿಂಗೊಂದು ಶಬ್ದ ನನ್ನ ಕಿವಿ ಮೇಲೆ ಬಿತ್ತು. ಅದು ಅತ್ಯಂತ ಸಂಭಾವಿತ ಸಂಬೋಧನೆ, ಸತ್ಯ. ಆದರೆ ಹಾಗೆ ಅಜ್ಜಿ ಅಂತ ಕರೆದಿದ್ದು 65 ವರ್ಷದ ಓರ್ವ ವೃದ್ದ. ಮತ್ತು ಹಾಗೆ ಕರೆಸಿಕೊಂಡವರ ವಯಸ್ಸು 83-84. ಕೂಡಲೆ ನಾನು ಆ ವೃದ್ದೆಯನ್ನು ನೋಡಿದಾಗ ಆಕೆ ಒಂದು ಕ್ಷಣ ಗಲಿಬಿಲಿಗೊಂಡು ಮುಖ ಗಂಟಿಕ್ಕಿಕೊಂಡು ನಿಮಗೆ ರಿಟೈರ್ ಆಗಿ 5-6 ವರ್ಷ ಆಗಿರಬೇಕಲ್ಲವೇ, ಹೇಗಿದೆ ನಿವೃತ್ತಿ‌ ಜೀವನ ಅಂತ ಮರುಪ್ರಶ್ನೆ ಹಾಕಿದ್ರು. ಇದು ಆ ವ್ಯಕ್ತಿಗೆ ಇರಿಸುಮುರಿಸು ಉಂಟು ಮಾಡಿತು. 

ನನಗನ್ನಿಸಿದ್ದು; ಹಂಗಾದ್ರೆ ಆ ಹೆಂಗಸು 17 - 18 ವರ್ಷಕ್ಕೆ ಮಾತ್ರವೆ ಚಿಕ್ಕವನಾದ ವ್ಯಕ್ತಿಗೆ (ಆತನೂ ಓರ್ವ ಚಿಕ್ಕ ವೃದ್ದನೆ) ಅಜ್ಜಿಯಾಗಿ ಹೋದಳೇ? ಅವರಿಬ್ಬರೂ ಅಕ್ಕಪಕ್ಕದ‌ ಮನೆಯವರಾಗಿಯೋ‌ ಸಂಬಂಧಿಕರಾಗಿಯೊ ಇದ್ದಿದ್ದರೆ 18 ವರ್ಷದ ನಂತರ ಹುಟ್ಟಿದ ಆ ಹುಡುಗನಿಂದ ತನ್ನ ತಾರುಣ್ಯದಲ್ಲೆ ಆಕೆ ಅಜ್ಜಿ ಅಂತ ಕರೆಸಿಕೊಳ್ಳಲು ಅರ್ಹಳಾಗಿಹೋಗಿದ್ದಳೇ ಅಂತ. ಮತ್ತು ಇದು ಗೊಂದಲವಾಗಿ ನನ್ನನ್ನು ಅನಪೇಕ್ಷಣಿಯವಾಗಿ ಕಾಡಿತು!

ಹೀಗೆ ಇತ್ತೀಚಿನ‌ ದಿನಗಳಲ್ಲಿ ಬೇರೊಬ್ಬರನ್ನು‌ ಸಂಬೋಧಿಸುವುದರ ಹಿಂದೆ‌ ತಮ್ಮ ವಯಸ್ಸನ್ನು‌ ಮರೆಮಾಚುವ ಒಂದು ದೊಡ್ಡ ಅಜೆಂಡಾ ಇರುತ್ತದೆ ಎನ್ನುವುದು ಮಾತ್ರ ಸುಳ್ಳಲ್ಲ. ಹಾಗೂ ಇದರೊಂದಿಗೆ ತಾನು ತುಂಬಾ ಮಾಡರ್ನ್ ಅನ್ನಿಸಿಕೊಳ್ಳುವ ಉಮೇದು ಕೂಡ ಇರುತ್ತದೆ. ಹೇಗೆ ಬೈಗುಳಗಳೆಲ್ಲವೂ ಹೆಣ್ಣನ್ನೇ‌ ಕೇಂದ್ರೀಕರಿಸಿಕೊಂಡಿರುತ್ತವೊ ಹಾಗೆಯೆ ಇಲ್ಲೆಲ್ಲಾ ವಯಸ್ಸಿಗೆ ಮೀರಿದ ಸಂಬೋಧನೆಗೆ ಒಳಗಾಗಿ ಮುಜುಗರಕ್ಕೊಳಗಾಗುವುದು ಮತ್ತೆ ಮಹಿಳೆಯೆ ಹೆಚ್ಚು ಅನ್ನುವುದು ಗಮನಾರ್ಹ ವಿಷಯ. 

ಈ ಆಂಟಿ ಅನ್ನುವ ಪದವಂತೂ ಸ್ತ್ರೀಯರಿಗೆ ಅದೆಷ್ಟರ ಮಟ್ಟಿಗೆ ಕಸಿವಿಸಿ ಉಂಟು ಮಾಡಿದೆಯೆಂದರೆ ಈ ಪದವನ್ನು ಯಾಕಾದರೂ ಇಂಗ್ಲೀಷರು ಪರಿಚಯಿಸಿದರು (ಅಷ್ಟಕ್ಕೂ ಇಂಗ್ಲಿಷ್ ನಲ್ಲಿ ಹೆಚ್ಚು ಪ್ರಚಲಿತದಲ್ಲಿರುವುದು Aunt ಅನ್ನುವ ಪದ) ಅನ್ನುವಷ್ಟರ ಮಟ್ಟಿಗೆ. 

ಮದುವೆಯಾದ ಮರುದಿನ 18 ರ ಯುವತಿಯೊಬ್ಬಳು ಹೆಚ್ಚೂ ಕಡಿಮೆ ಅವಳದೆ ವಯಸ್ಸಿನವರಿಗೆ ಅದರಲ್ಲೂ ಹುಡುಗರಿಗೆ ಆಂಟಿಯಾಗಿ ಹೋಗುತ್ತಾಳೆ. ಐದಾರು ವರ್ಷಕ್ಕೆ ಮಾತ್ರ ದೊಡ್ಡವರಾದ ವರಸೆಯಲ್ಲಿ ಚಿಕ್ಕಮ್ಮನೋ, ಅತ್ತಿಗೆಯೋ (ಗಂಡನ ಅಕ್ಕ) ಅತ್ತೆಯೋ ಆಗಬೇಕಾದವರು "ಆಂಟಿ"ಯಾಗಿ ಹೋಗುತ್ತಾರಲ್ಲ ಅದು ಮಾತ್ರ ಹಾಗೆ ಕರೆಸಿಕೊಳ್ಳುವವರ ಪಾಲಿಗೆ ಇರಿಸುಮುರುಸಿನ ಅನುಭವ. ಕೆಲವು ಪ್ರಸಂಗಗಳಲ್ಲಿ ತನ್ನ ಗಂಡನಷ್ಟೆ ವಯಸ್ಸಾದ ಅಥವಾ ತುಸುವೇ ದೊಡ್ಡವನಾದ ವ್ಯಕ್ತಿಯೂ "ಅಂಕಲ್" ಆಗಿಹೋಗುತ್ತಾನಲ್ಲ ಅದೂ ಹೀಗೆಯೆ. (ಐದಾರು ವರ್ಷಗಳಿಗಿಂತ ದೊಡ್ಡವನಾದ ಗಂಡ ಅಂಕಲ್ ಹಾಗೂ ಹೆಂಡತಿ ದೊಡ್ಡವಳಾದ ಪ್ರಸಂಗಳಲ್ಲಿ ಆಂಟಿ ಅಂತಲೂ ಕರೆಯುವುದು ಸೂಕ್ತ ಅನ್ನುವುದು ಕಿಡಿಗೇಡಿಗಳ ಅಭಿಪ್ರಾಯವೂ ಆಗಿದೆ‌ ಬಿಡಿ) 

ಇಲ್ಲೆಲ್ಲಾ ಹಾಗೆ ಕರೆಯುವವರಿಗೆ ಕನಿಷ್ಠ ಸಾಮಾನ್ಯ ಪ್ರಜ್ಞೆಯೂ ಇರುವುದಿಲ್ಲ ಅನ್ನುವುದು ಮಾತ್ರ ಸತ್ಯ. ಅದು ಕೇವಲ‌ ರೂಢಿಗತವಾಗಿ ಬಂದುದು ಅನ್ನುವಂತೆ ಮಾಮೂಲಾಗಿ ಸಂಬೋಧಿಸುತ್ತಾರೆ.  

ಮತ್ತೊಂದು ಟ್ರೆಂಡ್ ಎಂದರೆ ಮಗಳ/ಮಗನ ಮಕ್ಕಳಿಂದ ಅಜ್ಜಿ-ತಾತ ಅನ್ನಿಸಿಕೊಳ್ಳಲು ಅವಮಾನ ಎನ್ನುವಂತೆ ಅಜ್ಜಿಯರೆಲ್ಲಾ ಅಮ್ಮಮ್ಮ, ಅವ್ವ ಅಂತಲೂ ತಾತಂದಿರೆಲ್ಲಾ ಅಪ್ಪ ಅಂತಲೂ ಕರೆಯುವಂತೆ ಚಾಕೋಲೇಟ್ ಗಳನ್ನ ಕೊಟ್ಟು ಮೊಮ್ಮಕ್ಕಳನ್ನು ಪುಸಲಾಯಿಸಿ ಹಾಗೇಯೆ ಅನ್ನಿಸಿಕೊಂಡು ಬೀಗುವುದನ್ನು ಕಂಡಿದ್ದೇನೆ. ಆದರೆ, ಸಂಬೋಧನೆಯನ್ನು ಮಾತ್ರ ಬದಲಿಸಬಹುದೆ ಹೊರತು ಅಜ್ಜಿ-ತಾತ ಸಂಬಂಧವನ್ನು ಮಾಡಿಫೈ ಮಾಡಲು ಸಾಧ್ಯವಿಲ್ಲ ಬಿಡಿ. 

ಈ ಅತ್ತೆ, ಚಿಕ್ಕಮ್ಮ, ಅತ್ತಿಗೆ, ಮಾವ, ಚಿಕ್ಕಪ್ಪ, ಭಾವ ಅನ್ನಲು ಮುಜುಗರ ಎನಿಸಿದರೆ ಸಾರ್ವತ್ರಿಕವಾಗಿ ಒಪ್ಪಿತವಾಗುವ ಅಕ್ಕ-ಅಣ್ಣ ಅಂತ ಸಂಬೋಧಿಸಬಹುದಲ್ಲವೆ!? ಅವಾ‌ ಪರಿಚಿತ, ಅಪರಿಚಿತರನ್ನುಆಂಟಿ ಅಂಕಲ್ ಎಂದು ಕರೆವ ಬದಲಿಗೆ ಸರ್, ಮೇಡಂ, ಅಕ್ಕ, ಅಣ್ಣ ಅನ್ನುವ ಪದಗಳನ್ನು ಬಳಸಿ ಕರೆದರೆ ನಷ್ಟವೇನೂ ಆಗುವುದಿಲ್ಲವಲ್ಲ. ಇಲ್ಲೇನೂ ವಯೋಮಾನದ ಪರಿಗಣನೆಯಾಗಲಿ ಅಥವಾ ಅಗತ್ಯವಾಗಲಿ‌ ಕಾಣುವುದಿಲ್ಲ. 

ಇನ್ನು ರಾಯರೆ, ಭಟ್ರೆ, ಶೆಟ್ರೆ, ಗೌಡ್ರೇ, ಪಟೇಲರೇ ಅನ್ನುವ ಸುಪೀಯಾರಿಟಿ ಸೆನ್ಸ್ ಹಾಗೂ  ನಿಂಗ, ಸಿದ್ದ, ತಿಮ್ಮ, ಬೊಮ್ಮ ಅನ್ನುವ ಕೀಳಿನ ತಾರತಮ್ಯ ಸೂಚಕ ಸಂಬೋಧನೆಗಳದು ದೊಡ್ಡ‌ ಕಥೆ ಬಿಡಿ.

ಒಟ್ಟಾರೆ ಅವರವರ ಭಾವಕ್ಕೆ ತಕ್ಕಂತೆ ವರ್ತಿಸುವುದು ಜಾಯಮಾನವಾಗಿದೆ ಅಷ್ಟೆ. ಅವರು ನಡದದ್ದೆ ದಾರಿ ಅನ್ನೋ ಹಾಗೆ.

-ಪ್ರಸನ್ನಕುಮಾರ್ ಕೆರಗೋಡು


Sunday, 24 April 2022

ಪಂಚಾಯತ್ ರಾಜ್ ವ್ಯವಸ್ಥೆ: ಸುಸ್ಥಿರ ಅಭಿವೃದ್ದಿಯ ಆದ್ಯತೆಯಾಗಲಿ

ಪಂಚಾಯತ್ ರಾಜ್ ವ್ಯವಸ್ಥೆ: ಒಂದು‌ ನೋಟ


ಇಂದು ಪಂಚಾಯತ್ ರಾಜ್ ದಿನ. ದೇಶದ ಅಭಿವೃದ್ಧಿಗೆ ಒಂದು ತಾತ್ವಿಕ ಮತ್ತು ಪ್ರಾಯೋಗಿಕ ಮುನ್ನುಡಿ ಬರೆದ ಭಾರತದ ಪಂಚಾಯತ್ ರಾಜ್ ವ್ಯವಸ್ಥೆ ಇಡಿ ಪ್ರಪಂಚದಲ್ಲಿಯೆ ಒಂದು ಅಭೂತಪೂರ್ವ ಅನ್ನಿಸುವ ಗ್ರಾಮೀಣಾಭಿವೃದ್ಧಿ ವ್ಯವಸ್ಥೆ.
ಒಕ್ಕೂಟ ಮತ್ತು ಪ್ರಾಂತೀಯ ಸರ್ಕಾರದ ಕೇಂದ್ರೀಕೃತ ಆಡಳಿತ ವ್ಯವಸ್ಥೆಯಿಂದ ದೇಶದ ಕಟ್ಟಕಡೆಯ ಮನೆಗೂ ಹಾಗೂ ವ್ಯಕ್ತಿಗೂ ಆಡಳಿತ ತಲುಪಲು‌ ಕಷ್ಟಸಾಧ್ಯ ಎನ್ನುವುದನ್ನು ಮನಗಂಡು ಗ್ರಾಮ ಮಟ್ಠದ ಚುನಾಯಿತ ಪ್ರತಿನಿಧಿಗಳ ಮೂಲಕ ವಿಕೇಂದ್ರೀಕರಣ ವ್ಯವಸ್ಥೆಯನ್ನು ಜಾರಿಗೆ ತರಲು ಸಾಧ್ಯವಾಯಿತು. "ಇದೊಳ್ಳೆ ಪಂಚಾಯ್ತಿ" ಅನ್ನುವ ಆಡುನುಡಿಯು ಕೇವಲ ಒಂದು ನುಡಿಯಾಗಿ ಮಾತ್ರವಿರದೆ ಇಂದು ವಿಡಂಬನಾ ರೂಪಕವಾಗಿ ಪಂಚಾಯತಿಗಳನ್ನು ವಿಮರ್ಶಿಸುವ ಕಾಲ‌ಘಟ್ಟದಲ್ಲೂ ಅಭಿವೃದ್ಧಿಯ ವಿಷಯಕ್ಕೆ ಬಂದಾಗ ಈಗಲೂ ಅತ್ಯುತ್ತಮ ಅನ್ನುವ ವ್ಯವಸ್ಥೆ ಇದಾಗಿದೆ. ಇಂದು ಕೆಲವೆಡೆ ನಡೆಯುತ್ತಿರುವ ಕೆಲವು ಅಹಿತ ಅನ್ನಿಸುವಂತಹ ಬೆಳವಣಿಗೆಗಳನ್ನು ಗಮನಿಸಿದಾಗ ನಕಾರಾತ್ಮಕ ಅನ್ನಿಸುವಂತಹ ಅಭಿಪ್ರಾಯ ಮೂಡುವುದು ಸಹಜವಾದರೂ ಪಂಚಾಯತ್ ರಾಜ್ ವ್ಯವಸ್ಥೆಗೆ ಪರ್ಯಾಯ ಎಂದು ಈಗಲೂ ಯಾವುದನ್ನೂ ಊಹಿಸಿಕೊಳ್ಳಲಾಗುವುದಿಲ್ಲ. ಈ ದೃಷ್ಟಿಯಿಂದ ಇದು ದೇಶದಲ್ಲಿ ಜಾರಿಗೆ ಬಂದ ಗ್ರಾಮೀಣಾಭಿವೃದ್ಧಿಯ ಆ ಮೂಲಕ ದೇಶದ ಅಮೂಲಾಗ್ರ ಅಭಿವೃದ್ಧಿಯ ಅಧ್ಯಾಯದಲ್ಲಿ ಒಂದು ಕ್ರಾಂತಿಕಾರಿ ಶಕೆಯಾಗಿದೆ.

ದೇಶದಲ್ಲಿ ಈ ವ್ಯವಸ್ಥೆಯ ವಿಕಾಸವನ್ನು ಸ್ಥೂಲವಾಗಿ ಪರಾಂಬರಿಸುವುದಾದರೆ ಇದರ ವಿಕಾಸವನ್ನು ವಸಾಹತುಶಾಹಿ ಭಾರತದಲ್ಲೆ ಇದರ ಬಗ್ಗೆ ನಡೆದ ಅನೇಕ ಪ್ರಯೋಗಗಳ ಮೂಲಕ ಗಮನಿಸಬಹುದು. ಕವಿ ರವೀಂದ್ರನಾಥ್ ಟ್ಯಾಗೋರ್ ರ ಶಾಂತಿನಿಕೇತನ್, ಶ್ರೀನಿಕೇತನ್ ಸಂಸ್ಥೆಗಳು, ಮಹಾತ್ಮ ಗಾಂಧಿಯವರ ಹಿಂದ್ ಸ್ವರಾಜ್ ನಲ್ಲಿ ಪ್ರಸ್ತಾಪಿಸಿರುವ ಹದಿನೆಂಟು ರಚನಾತ್ಮಕ ಕಾರ್ಯಕ್ರಮಗಳ ಅನುಷ್ಠಾನ ಮುಂತಾದವುಗಳು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಮುನ್ನುಡಿ‌ ಬರೆದವುಗಳಾಗಿವೆ. ಸ್ವತಂತ್ರ ಭಾರತದ ಅಭಿವೃದ್ಧಿಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 1957 ರಲ್ಲಿ ರಚಿತವಾದ ಬಲವಂತರಾಯ್ ಮೆಹ್ತಾ ಸಮಿತಿಯ ವರದಿಯು ಗ್ರಾಮ, ತಾಲ್ಲೂಕು ಮತ್ತು ಜಿಲ್ಲೆಗಳ ಹಂತದಲ್ಲಿ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲು ಶಿಫಾರಸ್ಸು ಮಾಡಿದ್ದು ಇಡಿ ಪಂಚಾಯತ್ ವ್ಯವಸ್ಥೆಯ ಕಾನೂನಾತ್ಮಕ ಆರಂಭವಾಗಿದೆ. 1977 ರಲ್ಲಿ ಅಂದಿನ ಜನತಾ ಸರ್ಕಾರ ನೇಮಿಸಿದ ಅಶೋಕ್ ಮೆಹ್ತಾ ಸಮಿತಿ ಗ್ರಾಮ ಮತ್ತು ಜಿಲ್ಲೆಯಲ್ಲಿ ಎರಡು ಹಂತಗಳ ಪಂಚಾಯತ್ ಸಂಸ್ಥೆಗಳನ್ನು ಜಾರಿಗೆ ತರುವಂತೆ ಶಿಫಾರಸು ಮಾಡಿದ್ದು ಹಾಗೂ 1985 ಜಿ.ವಿ.ಕೆ ರಾವ್ ಸಮಿತಿ ಪಂಚಾಯತ್ ವ್ಯವಸ್ಥೆಯಲ್ಲಿ ಅಧಿಕಾರಿಗಳ ಪಾತ್ರದ ಕುರಿತು ಬೆಳಕು ಚೆಲ್ಲುವುದರೊಂದಿಗೆ ಈ ವ್ಯವಸ್ಥೆ ದೇಶದ ಅವಿಭಾಜ್ಯ ಅಂಗ ಎನ್ನುವಷ್ಟರ ಮಟ್ಟಿಗೆ ವಿಕಾಸ ಹೊಂದಿದ್ದನ್ನು ಕಾಣಬಹುದಾಗಿದೆ.

ರಾಜೀವ್ ಗಾಂಧಿಯವರು ಪ್ರಧಾನಮಂತ್ರಿಯಾಗಿದ್ದಾಗ ರಚಿಸಿದ ಎಲ್.ಎಂ.ಸಿಂಗ್ವಿ ಸಮಿತಿಯು ಐತಿಹಾಸಿಕ ಎನ್ನಬಹುದಾದ ಶಿಫಾರಸುಗಳನ್ನು ಮಾಡಿತು.
ಪಂಚಾಯತ್ ರಾಜ್ ವ್ಯವಸ್ಥೆಗೆ ಸಂವಿಧಾನದ ಮಾನ್ಯತೆ ಸಿಗಬೇಕು, ಗ್ರಾಮಗಳ ಸಮೂಹ ಮಟ್ಟದಲ್ಲಿ ನ್ಯಾಯ ಪಂಚಾಯಿತಿಗಳನ್ನು ಸ್ಥಾಪಿಸಬೇಕು, ಪ್ರಜಾಸತ್ತಾತ್ಮಕ ವಿಕೇಂದ್ರೀಕರಣದ ಕೇಂದ್ರವನ್ನಾಗಿ ಗ್ರಾಮ ಸಭೆಗಳನ್ನು ಮಾನ್ಯತೆಗೊಳಪಡಿಸಬೇಕು, ಗ್ರಾಮ ಪಂಚಾಯಿತಿಗಳು ಹೆಚ್ಚಿನ ಸಂಪನ್ಮೂಲಗಳನ್ನು ಹೊಂದಿರಬೇಕು, ಪಂಚಾಯತ್ ಸಂಸ್ಥೆಗಳಿಗೆ ಸಂಬಂಧಿಸಿದ ನ್ಯಾಯಾಂಗ ವಿಷಯಗಳನ್ನು ನಿರ್ಣಯಿಸಲು ನ್ಯಾಯಮಂಡಳಿಗಳನ್ನು ಸ್ಥಾಪಿಸಬೇಕು ಎಂಬಂತಹ ಮಹತ್ವಪೂರ್ಣ ಶಿಫಾರಸ್ಸುಗಳನ್ನು ಮಾಡಿತು.

ಸಂವಿಧಾನದ 40 ನೇ ವಿಧಿಯಲ್ಲಿ ಪಂಚಾಯತ್‌ ವ್ಯವಸ್ಥೆ ಹಾಗೂ 246 ನೇ ವಿಧಿಯಲ್ಲಿ ಸ್ಥಳೀಯ ಸರ್ಕಾರಗಳ ಅಗತ್ಯತೆಯ ಕುರಿತು ಇದ್ದ  ಉಲ್ಲೇಖಗಳ ಅವಕಾಶಗಳನ್ನು ಶಾಸನ ಮಾಡಲು ಸಂಸತ್ ಗೆ ಇರುವ ಅಧಿಕಾರವನ್ನು ಬಳಿಸಿಕೊಂಡು ಸಂವಿಧಾನಕ್ಕೆ ತಿದ್ದುಪಡಿ ತರಲು ನಿರ್ಧರಿಸಿದ್ದು ಮೊದಲೆ ಹೇಳಿದ ಹಾಗೆ ಹೊಸ ಶಕೆ ಪ್ರಾರಂಭವಾಗಲು ಅನುವಾದಂತಾಯಿತು. ಅಂತಿಮವಾಗಿ ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ (PRI) ತಳಮಟ್ಟದಲ್ಲಿ ಪ್ರಜಾಪ್ರಭುತ್ವದ ಸ್ಪೂರ್ತಿಯನ್ನು ಸ್ಥಾಪಿಸಲು 73 ನೇ ಸಾಂವಿಧಾನಿಕ ತಿದ್ದುಪಡಿ ಕಾಯಿದೆ, 1992 ರ ಮೂಲಕ ಈ ಸಂಸ್ಥೆಗಳನ್ನು ಸಾಂವಿಧಾನಿಕಗೊಳಿಸಲಾಯಿತು. ಇದು ಅಧಿಕೃತವಾಗಿ 1993 ರ ಏಪ್ರಿಲ್ 24 ರಿಂದ ಜಾರಿಗೆ ಬಂದು ದೇಶದಲ್ಲಿ ಗ್ರಾಮೀಣ ಅಭಿವೃದ್ಧಿಯ ಮಹತ್ವಪೂರ್ಣ ಅಧ್ಯಾಯಗಳು ಹೊಸ ಮಾದರಿಯಲ್ಲಿ ರೂಪುಗೊಳ್ಳಲು‌ ಕಾರಣವಾಯಿತು. ಸ್ಥಳೀಯ ಸಂಸ್ಥೆಯು ಸ್ಥಳೀಯ ಜನರಿಂದ ಚುನಾಯಿತರಾದ ಪ್ರತಿನಿಧಿಗಳ ಮೂಲಕ ಸ್ಥಳೀಯ ವ್ಯವಹಾರಗಳ ನಿರ್ವಹಣೆಯ ಸ್ಥಳೀಯ ಸ್ವಯಂ ಸರ್ಕಾರವಾಗಿದೆ ಎನ್ನುವಂತಾಗಿ ತಳಮಟ್ಟದ ಅಭಿವೃದ್ಧಿಯ ಪರ್ವವನ್ನು ಅನುಷ್ಠಾನಗೊಳಿಸಲು ಸಾಧ್ಯವಾಯಿತು.

ಸಧ್ಯ ನಮ್ಮ ದೇಶದಲ್ಲಿ ಸರಿ ಸುಮಾರು 2.6 ಲಕ್ಷ ಪಂಚಾಯಿತಿಗಳಿದ್ದು, ಇದರಲ್ಲಿ 2.5 ಲಕ್ಷ ಗ್ರಾಮ ಪಂಚಾಯಿತಿಗಳು, 7000 ಕ್ಕೂ ಹೆಚ್ಚಿನ ಬ್ಲಾಕ್ ಪಂಚಾಯಿತಿಗಳು ಮತ್ತು 630 ಕ್ಕೂ ಮೀರಿ ಜಿಲ್ಲಾ ಪಂಚಾಯಿತಿಗಳು ಸೇರಿವೆ. 30 ಲಕ್ಷಕ್ಕೂ ಹೆಚ್ಚು ಪಂಚಾಯಿತಿಗಳ ಪ್ರತಿನಿಧಿಗಳಿದ್ದಾರೆ. 2021-26 ರ ಅವಧಿಗೆ 15ನೇ ಹಣಕಾಸು ಆಯೋಗದ ಅಡಿಯಲ್ಲಿ ರೂ. 2,36,805 ಕೋಟಿ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ದೇಶದ ಅಭಿವೃದ್ಧಿಯ ಅಗ್ರ ಪಾತ್ರವನ್ನು ವಹಿಸಿರುವ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜನಮಾನಸದಲ್ಲಿ  ಸ್ಮರಣೀಯಗೊಳಿಸಿ ಇನ್ನಷ್ಟು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ 2010 ರ ಏಪ್ರಿಲ್ 24 ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದರ ಅರ್ಥಪೂರ್ಣ ಆಚರಣೆಯನ್ನು ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದ ಉಸ್ತುವಾರಿಯಲ್ಲಿ ಪ್ರತಿವರ್ಷ ನಡೆಸಿಕೊಂಡು ಬರಲಾಗುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯ ದೃಷ್ಟಿಯಿಂದ ಈ ವರ್ಷದ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಆಚರಣೆಯು  ವಿಶೇಷವಾಗಿದೆ. ಪಂಚಾಯತ್ ರಾಜ್ ಸಚಿವಾಲಯ 2011-12 ರಿಂದ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ಶಿಫಾರಸು ಮಾಡಿದ ಉತ್ತಮ ಕಾರ್ಯಕ್ಷಮತೆಯ ಪಂಚಾಯತ್‌ಗಳಿಗೆ ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತಿಕರಣ್ ಪುರಸ್ಕಾರ್ (DDUPSP), ನಾನಾಜಿ ದೇಶಮುಖ್ ರಾಷ್ಟ್ರೀಯ ಗೌರವ್ ಗ್ರಾಮ ಸಭೆ ಪುರಸ್ಕಾರ್ (NDRGGSP) ಮತ್ತು ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ (GPDP) ಪ್ರಶಸ್ತಿಗಳನ್ನು ಪುರಸ್ಕರಿಸಲಾಗುತ್ತಿದೆ.

ಪಂಚಾಯತ್ ರಾಜ್ ವ್ಯವಸ್ಥೆ ಜಾರಿಯಾದ ನಂತರ ಗ್ರಾಮೀಣ ಭಾರತದ ಅಭಿವೃದ್ಧಿಯಲ್ಲಿ ಯಶಸ್ಸಿನ ಹಲವು ಮಜಲುಗಳ ಸಾಧನೆಯಾಗಿದೆ. ಪಂಚಾಯತ್ ರಾಜ್ ವ್ಯವಸ್ಥೆಯು ಸರ್ಕಾರದ ಕಾರ್ಯಕ್ರಮಗಳು, ಸ್ವಯಂಸೇವಾ ಸಂಸ್ಥೆಗಳು ಮತ್ತು ಜನಸಾಮಾನ್ಯರ ನಡುವೆ ಪರಿಣಾಮಕಾರಿ ಸಮನ್ವಯವನ್ನು ಸಾಧಿಸಿದೆ. ಇದು ಗ್ರಾಮೀಣ ಜನರಿಗೆ ಒಂದರ್ಥದಲ್ಲಿ ರಾಜಕೀಯ ತರಬೇತಿ  ಶಾಲೆಯಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾಜ ಸೇವೆ, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಸಾಮಾಜಿಕ ಪ್ರಗತಿಯ ಶಾಲೆಗಳಾಗಿಯೂ ಇದು  ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಮೂಲಭೂತ ಸೌಕರ್ಯಗಳಾದ ರಸ್ತೆ ನಿರ್ಮಾಣ, ಕೆರೆಗಳ ಸ್ವಚ್ಚತೆ, ಬಂಡ್‌ಗಳನ್ನು ನಿರ್ಮಿಸುವುದು, ಚರಂಡಿಗಳ ನಿರ್ಮಾಣ, ಕೃಷಿ ಹೊಂಡಗಳ ನಿರ್ಮಾಣ, ಸಾಮಾಜಿಕ ಅರಣ್ಯ ಅಭಿವೃದ್ಧಿ, ವಸತಿ ಸೌಕರ್ಯ ಕಲ್ಪಿಸುವುದು,  ಶುದ್ಧ ಕುಡಿಯುವ ನೀರನ್ನು ಒದಗಿಸುವುದು ಮುಂತಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪಂಚಾಯತ್‌ಗಳು ಉತ್ತಮ ರೀತಿಯಲ್ಲಿ ಜಾರಿಗೆ ತರುತ್ತಿವೆ. ಗ್ರಾಮೀಣ ಜನರಿಗೆ ಅಗತ್ಯವಿರುವ ಜನನ, ಮರಣ ಪ್ರಮಾಣ ಪತ್ರ, ಆಸ್ತಿಯ ಖಾತೆ ಬದಲಾವಣೆ, ಇ-ಸ್ವತ್ತು ವಿತರಣೆ, ಮುಂತಾದ ಅನೇಕ ಅಗತ್ಯ ಧೃಡೀಕರಣ ಪತ್ರಗಳನ್ನು ವಿತರಿಸುತ್ತಾ ಅವರು ತಾಲ್ಲೂಕು ಅಥವಾ ಜಿಲ್ಲಾ ಕೇಂದ್ರಗಳಿಗೆ ಅಲೆಯುವುದನ್ನು ತಪ್ಪಿಸಲಾಗಿದೆ. 

ಕೊನೆಯ ಆದರೆ ಮುಖ್ಯ ಮಾತು;
ಪಂಚಾಯತ್ ರಾಜ್ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದಾಗಿಂದಲೂ ಕಾರ್ಯವನ್ನೇನೋ ನಿರ್ವಹಿಸುತ್ತಿವೆ. ಆದರೆ ನಿಯಮಿತವಾಗಿ
ಚುನಾವಣೆಗಳು‌ ನಡೆಯದಿರುವುದು, ಮೇಲಿನ‌ ಹಂತದ ಜನಪ್ರತಿನಿಧಿಗಳ ಅನಗತ್ಯ ಮಧ್ಯಪ್ರವೇಶ, ನೆಪಮಾತ್ರದ ಗ್ರಾಮ ಸಭೆಗಳು, ಅನುದಾನ ಹಂಚಿಕೆಯಲ್ಲಿ ತಾರತಮ್ಯ, ಜನಪ್ರತಿನಿಧಿಗಳ ಸ್ವಾರ್ಥಪರ ಚಿಂತನೆ, ಸ್ವಜನಪಕ್ಷಪಾತ, ಯೋಜನೆಗಳ ಅಸಮರ್ಪಕ ಅನುಷ್ಠಾನ, ಮಾಹಿತಿ ಹಕ್ಕು ದುರ್ಬಳಕೆ, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಂತಹ ದುರ್ಬಲ ವರ್ಗಗಳ ಸೂಕ್ತ ಪ್ರಾತಿನಿಧ್ಯದ ಕೊರತೆ, ಮಹಿಳಾ ಜನಪ್ರತಿನಿಧಿಗಳ ಪತಿ/ಮಕ್ಕಳ ಅನಗತ್ಯ ಕಿರಿಕಿರಿ, ಭ್ರಷ್ಟಾಚಾರ, ಅಧಿಕಾರಿ ಹಾಗೂ ನೌಕರರ ಕಾರ್ಯಕ್ಷಮತೆಯಲ್ಲಿನ ಕೊರತೆ, ಜನರಿಂದ ಅನಿಯಮಿತ ತೆರಿಗೆ ಪಾವತಿ, ವಿದ್ಯಾವಂತ ಯುವಜನರ ನಿರ್ಲಕ್ಷ್ಯ, ಅಗತ್ಯ ಸೇವೆ ಒದಗಿಸುವಲ್ಲಿನ ಅನಗತ್ಯ ವಿಳಂಬ, ಅಸಮರ್ಪಕ ಅಧಿಕಾರ ಹಂಚಿಕೆ ಮತ್ತು ಆರ್ಥಿಕ ಸಂಪನ್ಮೂಲಗಳ ಕೊರತೆ ಮುಂತಾದ ಸಮಸ್ಯೆಗಳು ಕೆಲವೆಡೆ ಚಾಲ್ತಿಯಲ್ಲಿದ್ದು ಇಂತಹ ಹಲವಾರು ಕಾರಣಗಳಿಂದ ಅನೇಕ  ಪಂಚಾಯತ್ ರಾಜ್ ಸಂಸ್ಥೆಗಳು ಸೂಕ್ತ ಸ್ಥಾನಮಾನ ಮತ್ತು ಘನತೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇವುಗಳನ್ನು ನಿರ್ಮೂಲನೆ ಮಾಡಿ ಸೂಕ್ತ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತಂದರೆ ಮನರೇಗಾ, ಜಲಜೀವನ್ ಮಿಷನ್, ಸ್ವಚ್ಛಭಾರತ ಅಭಿಯಾನ ಮುಂತಾದ ಬಡತನ ನಿರ್ಮೂಲನೆ, ಗ್ರಾಮೀಣ ಕುಡಿಯುವ ನೀರು ಸರಬರಾಜು, ಸ್ವಚ್ಚತೆ, ಆರೋಗ್ಯ ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸಿ ಸುಸ್ಥಿರ ಅಭಿವೃದ್ಧಿಯನ್ನು ಸಾಕ್ಷಾತ್ಕರಿಸಿಕೊಳ್ಳಬಹುದಾಗಿದೆ. ಇದು ಮರೀಚಿಕೆಯಾಗದಿರಲಿ.

Wednesday, 26 January 2022

 ಪ್ರಜೆಗಳೇ ಪ್ರಭುಗಳಾಗುವುದು ಎಂದು?

ಪ್ರಜಾಪ್ರಭುತ್ವವನ್ನು ಪ್ರತಿ ಸಾಲುಗಳಲ್ಲೂ ಉಸಿರಾಡಿಕೊಂಡು ಅದರ ಆಶಯಗಳನ್ನು ಅಭಿವ್ಯಕ್ತಿಪಡಿಸುತ್ತಾ ದೇಶದ ಪ್ರಗತಿಗೆ ಮಾರ್ಗದರ್ಶನ ನೀಡುತ್ತಿರುವ ಸಂವಿಧಾನವನ್ನು ಅಳವಡಿಸಿಕೊಂಡ ಗುರುತಾಗಿ ಆಚರಿಸುವ ಮತ್ತೊಂದು ಗಣರಾಜ್ಯ ದಿನ ಬಂದಿದೆ. ಭಾರತದಲ್ಲಿ ಪ್ರಜಾಪ್ರಭುತ್ವವು ಅಪಾಯದಲ್ಲಿದೆ ಎನ್ನುವ ಅಮರ್ತ್ಯ ಸೇನ್ ರ ಹೇಳಿಕೆಯ ನಡುವೆಯೆ ಈ ದೇಶದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಶಿಥಿಲಗೊಳ್ಳುತ್ತಿವೆ, ಸರ್ವಾಧಿಕಾರಿ ವ್ಯವಸ್ಥೆಗೆ ದೇಶದ ಆಡಳಿತವು ಮುಗ್ಗುಲು ಬದಲಿಸಿಕೊಳ್ಳುತ್ತಿದೆ‌ ಎಂಬಂತಹ ಆತಂಕಿತ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿವೆ. ದೇಶವು ಸಂವಿಧಾನವನ್ನು ಅಳವಡಿಸಿಕೊಂಡು ಗಣತಂತ್ರವಾದ ದಿನವನ್ನು ಸ್ಮರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಹಾಗೆ‌ ನಿಜವಾಗಿಯೂ ಆಗುತ್ತಿದೆಯೆ ಎಂದು ಅವಲೋಕಿಸುವ ತುರ್ತು ಮತ್ತು ಸಮಯ ಬಂದಿದೆ. 

ಪ್ರಜೆಗಳೆ ಪ್ರಭುಗಳು ಅನ್ನುವ ವ್ಯವಸ್ಥೆಯನ್ನು‌ ಹೊಂದಿರುವ ಭಾರತದಲ್ಲಿ ತನ್ನ ಏಳು ದಶಕದ ಸ್ವತಂತ್ರ ಆಡಳಿದಲ್ಲಿ ಪ್ರಜೆಗಳು‌ ಇಲ್ಲಿ ಪರಮಾಧಿಕಾರ ಹೊಂದಿದ್ದು ಬಹಳ ಕಡಿಮೆಯೆ. ಪ್ರಜೆಗಳೆ ಆಡಳಿತ ವ್ಯವಸ್ಥೆಯ ಮೂಲ ಸೆಲೆಗಳು ಆದರೆ ಅವರ ಪ್ರತಿ ನಿಧಿಗಳು ಅದನ್ನು ನಿಭಾಯಿಸತ್ತಾರೆ ಎನ್ನುವ ವಿಚಾರವನ್ನು ತೆಗೆದುಕೊಂಡರೂ ಪ್ರಜಾಪ್ರತಿನಿಧಿಗಳು ತಮ್ಮನ್ನು ಚುನಾಯಿಸಿ ಕಳಿಸಿದ ಜನರ ಆಶೊತ್ತರಗಳನ್ನು ಅಮೂಲಾಗ್ರವಾಗಿ ಅಲ್ಲದಿದ್ದರೂ ಸಮಾಧಾನಕರ ಅನ್ನುವಷ್ಟರ ಮಟ್ಟಿಗೂ ಪೂರೈಸಿದ್ದು ಆಗಿಲ್ಲ. ರಾಷ್ಟ್ರಮಟ್ಟದಲ್ಲಿ ಆಳ್ವಿಕೆ‌‌ ನಡೆಸಿದ ಜವಹರಲಾಲ್ ನೆಹರು, ಇಂದಿರಾಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ನರೇಂದ್ರಮೋದಿ ಅಥವಾ‌ ಅನೇಕ ರಾಜ್ಯಗಳ ಉದಾಹರಣೆಗಳನ್ನೂ ಒರೆಗಚ್ಚಿ‌ ನೋಡಿದಾಗ ನಮಗೆ‌‌ ಕಾಣುವುದು ವ್ಯಕ್ತಿಕೇಂದ್ರಿತ ಅಥವಾ‌ ಕುಟುಂಬ ಕೇಂದ್ರಿತ ಆಡಳಿತ ವ್ಯವಸ್ಥೆಯೆ‌ ಹೊರತು ಪಕ್ಷ ಎಂದು ಹೇಳುವ ಸಾಂಸ್ಥಿಕ ರೂಪ ಆಡಳಿತ ನಡೆಸಲಿಲ್ಲ. ಇಡಿ ಆಡಳಿತ ವ್ಯಕ್ತಿ ಕೇಂದ್ರಿತ ವ್ಯವಸ್ಥೆಯಾಯಿತೆ ಹೊರತು ಅದು‌ ರಾಜಕೀಯ ಪಕ್ಷ,‌ ಅದರ ಸಿದ್ದಾಂತ ಮತ್ತು ಪ್ರಣಾಳಿಕೆಗಳನ್ನು‌ ಹೊಂದಿರುವ‌ ಸಾಂಸ್ಥಿಕ ವ್ಯವಸ್ಥೆಯು ಮುಖ್ಯ ನೆಲೆಯಲ್ಲಿ ಬಂದು ದೇಶವನ್ನು‌ ಮುನ್ನೆಡೆಸಲು ಸಾಧ್ಯವಾಗಲಿಲ್ಲ. 

ಹದಿನಾರು ವರ್ಷಗಳ ಸುದೀರ್ಘ ಕಾಲ ಜರ್ಮನಿಯನ್ನು‌ ಮುನ್ನೆಡೆಸಿದ ಏಂಜೆಲಾ ಮಾರ್ಕೆಲ್ "ಸ್ಪಷ್ಟ ಅಭಿಪ್ರಾಯ ಮತ್ತು ಪರಸ್ಪರ ಗೌರವದೊಂದಿಗೆ ಎಲ್ಲರೂ ರಾಜಿ ಮಾರ್ಗವನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕು. ಅದೇ ರಾಜಕೀಯ. ಅದು ಯಾವಾಗಲೂ ತನ್ನ ಮುಂದಿನ ಸಾಮಾನ್ಯ ಮಾರ್ಗವನ್ನು ಹುಡುಕಲು ಪ್ರಯತ್ನಿಸುತ್ತದೆ" ಎಂಬ ತಮ್ಮದೆ ಅಭಿಪ್ರಾಯದ ಆಶಯದಂತೆ‌ ಅಧಿಕಾರವನ್ನು ತಮ್ಮ ಸುತ್ತಲೆ ಅಂತ ಎಲ್ಲೂ ಕೇಂದ್ರೀಕರಿಸಿಕೊಳ್ಳದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ದೇಶವನ್ನು ಮುನ್ನೆಡಿಸಿದ ರೀತಿ ಎಲ್ಲಾ‌ ನಾಯಕರುಗಳಿಗೂ ಅನುಕರಣೀಯ. ನಿಜವಾದ ನಾಯಕರ ಇಂತಹ ಪ್ರಜಾಪ್ರಭುತ್ವದ ಸ್ಪೂರ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಡೆಗಳು ಭವಿಷ್ಯದ ತಲೆಮಾರುಗಳಿಗೆ ಉತ್ತಮ ಉದಾಹರಣೆಗಳಾಗಿ‌ ನಿಲ್ಲುತ್ತವೆ.

ಪ್ರಜಾಪ್ರಭುತ್ವದ ತಳಹದಿ ಎಂದು ಹೇಳಲಾಗುವ ಚುನಾವಣಾ ವ್ಯವಸ್ಥೆಗೆ ಭಾರತದ‌ ಚುನಾವಣಾ ಆಯೋಗ ಅನೇಕ ಸುಧಾರಣೆಗಳನ್ನು ತಂದಿದೆ. ಆದರೂ ಧರ್ಮ, ಜಾತಿ, ಪ್ರಾದೇಶಿಕತೆ, ಮತದಾನದ  ಸಂದರ್ಭದಲ್ಲಿನ ಹಣ, ಹೆಂಡ, ಒಡವೆ-ವಸ್ತುಗಳ ಆಮಿಷಗಳು ಮತ್ತು ಹಂಚಿಕೆಗಳಂತಹ ಹಲವಾರು ಅಹಿತಕರ‌ ಘಟನೆಗಳನ್ನು ನೋಡುವಾಗ ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತ‌ ಹಾದಿಯಲ್ಲಿ ನಡೆಯುತ್ತಿವೆ ಎಂದು‌ ಅಷ್ಟಾಗಿ ಅನ್ನಿಸದಿದ್ದರೂ ಈಗಲೂ‌‌ ಇದು ನಂಬಿಕೆ ಇರಿಸಬಹುದಾದ ಒಂದು ವ್ಯವಸ್ಥೆಯಾಗಿದೆ. ಇದರಿಂದಾಗಿ ಪ್ರಜಾಪ್ರಭುತ್ವದ ಆಶಯವು ಇನ್ನೂ ಜೀವಂತವಾಗಿದೆ ಎಂದು ಭಾವಿಸಬಹುದು.

ಇದರ ಜೊತೆಗೆ ಆಡಳಿತ ಮತ್ತು ವಿರೋಧ ಪಕ್ಷಗಳು ಆ ದೇಶ ಅಥವಾ ರಾಜ್ಯದ ಸರ್ವಾಂಗೀಣ ಪ್ರಗತಿಗಾಗಿ ತಮ್ಮೆಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ರಚನಾತ್ಮಕ ಅನ್ನಿಸುವ ರೀತಿಯಲ್ಲಿ ನಡೆದುಕೊಳ್ಳಬೇಕಾಗಿರುತ್ತದೆ. ಆದರೆ‌ ವಾಸ್ತವದಲ್ಲಿ ಹಾಗೆ ಆಗದೆ ಅವುಗಳ ನಾಯಕರುಗಳು ಅಸಹ್ಯಕರ‌ ಅನ್ನಿಸುವ ಭಾಷೆಯಲ್ಲಿ ಪರಸ್ಪರ ವೈಯಕ್ತಿಕ ನಿಂದನೆ, ದೋಷಾರೋಪಣೆ ಮಾಡಿಕೊಳ್ಳುವಲ್ಲಿಯೆ ತಮ್ಮ ಶಕ್ತಿಯನ್ನು ವ್ಯಯಿಸುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಇನ್ನೂ ಮುಂದೆ‌ ಹೋಗಿ ಆಡಳಿತ ಪಕ್ಷಗಳು ರಾಷ್ಟ್ರ ಅಥವಾ ರಾಜ್ಯಮಟ್ಟದ ತಮ್ಮ ಅಧೀನ ತನಿಖಾ ಸಂಸ್ಥೆಗಳನ್ನು ತಮ್ಮಗಳ  ಹಿತಾಸಕ್ತಿಗೆ ಅನುಗುಣವಾಗಿ ಬಳಸಿಕೊಂಡು ಅವುಗಳನ್ನು ಬೇರೆ ಪಕ್ಷಗಳ ಮುಂಚೂಣಿ ನಾಯಕರು ಅಥವಾ ಅವರ ಹತ್ತಿರದವರ ನೈತಿಕ ಶಕ್ತಿಯನ್ನು ಕುಗ್ಗಿಸಲು ಉಪಯೋಗಿಸಿಕೊಳ್ಳುವ ಪರಿಪಾಠವಂತೂ ಎಲ್ಲಾ ಪಕ್ಷಗಳಿಂದಲೂ ಎಗ್ಗಿಲ್ಲದೆ ಸಾಗುತ್ತಿದೆ. 

ಇನ್ನು ಜನಪರ ಸರ್ಕಾರವೊಂದು ರೂಪಿಸಬೇಕಾದ ಕಲ್ಯಾಣ ಯೋಜನೆಗಳು ಜನಪ್ರಿಯ ಎನ್ನಿಸುವ ಮಾದರಿಯ ಯೋಜನೆಗಳಾಗಿ ಜನರ ತಾತ್ಕಾಲಿಕ ಅಗತ್ಯತೆಗಳನ್ನು ಮಾತ್ರ ಪೂರೈಸಿ ಅವರ ಮನಗೆಲ್ಲಲು ಬಹುತೇಕ ಎಲ್ಲಾ ಪಕ್ಷಗಳೂ ಕಂಡುಕೊಂಡಿರುವ ಕ್ಷುಲ್ಲಕ ಎನಿಸುವ ಮಾರ್ಗಗಳಾಗಿವೆ. ಸ್ವತಂತ್ರ ಆಡಳಿತ‌ ವ್ಯವಸ್ಥೆಯನ್ನು ಹೊಂದಿ ೭೫ ವರ್ಷವಾಗುತ್ತಾ ಬಂದರೂ ದೇಶದ ಅರ್ಧದಷ್ಟು ಜನಸಂಖ್ಯೆ ಹೊಂದಿರುವ ಮಹಿಳಾ ಮೀಸಲು ಅಥವಾ ಅದಕ್ಕೆ ಪೂರಕವಾದ ರಚನಾತ್ಮಕ ಅನ್ನಿಸುವ ಕಾಯ್ದೆ ಹಾಗೂ ಯೋಜನೆಗಳನ್ನು ರೂಪಿಸಲು ಸಾಧ್ಯವಾಗಿಲ್ಲ. ನಮ್ಮ ಕಾಡುಗಳು, ವನ್ಯಜೀವಿಗಳು, ನದಿ ಕೆರೆಗಳು ಸಮುದ್ರ ತೀರಗಳು, ವಾತಾವರಣವನ್ನು ಮಾಲಿನ್ಯದಿಂದ ಮುಕ್ತಗೊಳಿಸುವ ಹಾಗೂ ಅವುಗಳ ಮೇಲೆ ಮಾನವನಿಂದ ಆಗುತ್ತಿರುವ ಅತ್ಯಾಚಾರಗಳನ್ನು‌ ಹತ್ತಿಕ್ಕುವ ಪರಿಣಾಮಕಾರಿಯಾದ ಕಾಯ್ದೆಗಳು ರೂಪುಗೊಳ್ಳಲೆ ಇಲ್ಲ. ಯುವಜನರೇ ಅಧಿಕವಾಗಿರುವ ನಮ್ಮ ದೇಶದಲ್ಲಿ ಎಲ್ಲರಿಗೂ ಒಪ್ಪಿಗೆಯಾಗುವಂತಹ ಯುವ‌ನೀತಿಗಳನ್ನು ತರಲಾಗಿಲ್ಲ. ದೇಶವೊಂದರ ಪ್ರಗತಿಯ ತಳಹದಿ ಎಂದು ಹೇಳಲಾಗುವ ಶಿಕ್ಷಣ ವ್ಯವಸ್ಥೆಗೆ ತಂದಿರುವ ಶಿಕ್ಷಣ ನೀತಿಗಳು ಅನೇಕ ದೋಷಗಳಿಂದ ಕೂಡಿದೆ ಎಂಬ ಆರೋಪದಿಂದ ಕೂಡ ಮುಕ್ತವಾಗಿಲ್ಲ. ಸದೃಢ ರಾಷ್ಟ್ರವೊಂದರ ಲಕ್ಷಣವಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಖಾಸಗಿ ಕುಳಗಳಿಂದ‌ ಮುಕ್ತಗೊಳಿಸಲು ಅಗತ್ಯ ಕಾಯ್ದೆಗಳನ್ನು ರೂಪಿಸುವ ಇಚ್ಛಾಶಕ್ತಿ ವ್ಯಕ್ತವಾಗಿಲ್ಲ. ಅದರ ಜೊತೆಗೆ ಕಾಯ್ದೆಗಳನ್ನು ರೂಪಿಸಲಾಗಲಿ ಅಥವಾ ಇನ್ನಿತರ ಕಾರಣಗಳಿಗಾಗಿಯಾಗಲಿ ಇತ್ತೀಚಿನ ವರ್ಷಗಳಲ್ಲಿ ಸಂಸತ್ತು ಹಾಗೂ ರಾಜ್ಯಗಳ ವಿಧಾನ‌ಸಭೆಗಳಲ್ಲಿ ಆರೋಗ್ಯಕರ ಚರ್ಚೆಗಳು ಆದ ಉದಾಹರಣೆಗಳು ಹೆಚ್ಚು ಕಾಣಸಿಗುವುದಿಲ್ಲ. "ಜಾನ್ ಸ್ಟುವರ್ಟ್ ಮಿಲ್‌ನಿಂದ ನಮಗೆ ತಿಳಿಯುವ ಮಹತ್ವದ ವಿಷಯವೆಂದರೆ ಪ್ರಜಾಪ್ರಭುತ್ವವು ಚರ್ಚೆಯಿಂದ ಒಡಮೂಡಿದ ಸರ್ಕಾರವಾಗಿದೆ.  ಮತ್ತು ನೀವು ಚರ್ಚೆಯನ್ನು ಭಯಭೀತಗೊಳಿಸಿದರೆ, ನೀವು ಎಷ್ಟು ಮತ್ತು ಹೇಗೆ ಮತಗಳನ್ನು ಎಣಿಸಿಕೊಂಡು ಪಡೆದರೂ ನೀವು ಪ್ರಜಾಪ್ರಭುತ್ವವನ್ನು ಪಡೆಯಲಾಗುವುದಿಲ್ಲ" ಎಂಬ ಅಮರ್ತ್ಯ ಸೇನ್ ರ ಮಾತುಗಳನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ಆರಂಭದಿಂದ‌ ಕೊನೆಯ‌ ದಿನಗಳವರೆಗೂ ರಾಜಕೀಯ ಮೇಲಾಟಗಳಿಗೆ ಸಾಕ್ಷಿಯಾಗುವ ಅಧಿವೇಶನಗಳಲ್ಲಿ ಕೊನೆಯ‌ ದಿನದಲ್ಲಿ ನೆಪಮಾತ್ರಕ್ಕೆ ಕಾಯ್ದೆಗಳನ್ನು ಮಂಡಿಸಿ‌ ಧ್ವನಿಮತ ಪಡೆದು ಅಂಗೀಕಾರ ಮಾಡುವ ಪರಿಪಾಠವು ಪ್ರಜಾಪ್ರಭುತ್ವದ ಅಣಕವಲ್ಲದೆ ಮತ್ತೇನೂ‌ ಅಲ್ಲ. ಇಷ್ಟಾಗಿಯೂ ಸಧ್ಯ ಇರುವ ಕಾಯ್ದೆಗಳು ರಾಜಕಾರಣಿಗಳು, ಕೆಲವು ಪ್ರಭಾವಿ ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರು ಮತ್ತು ಕಾರ್ಪೊರೇಟ್ ಧನವಂತರ ಕೈಗೆ ಸಿಕ್ಕಿ ಪರಿಣಾಮಕಾರಿಯಾಗಿ ಅನುಷ್ಠಾನ ಆಗದಿರುವುದು ಒಂದೆಡೆಯಾದರೆ ಮತ್ತೊಂದು ಕಡೆ ವಿವಿಧ ಮಂತ್ರಿಗಳು ಮತ್ತು ಇಲಾಖೆಗಳ ನಡುವೆ ಸಾಮರಸ್ಯ ಇಲ್ಲದೆ ಪರಿಣಾಮಕಾರಿ ಅನುಷ್ಠಾನ‌ ಕೂಡ ಸಾಧ್ಯವಾಗುತ್ತಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವಂತದ್ದು. 

ಇವೆಲ್ಲವುಗಳ ಜೊತೆಗೆ ಜಾತಿ ದೌರ್ಜನ್ಯಗಳ ವಿಷ, ಕೋಮು ದ್ವೇಷದ ಭಾವನೆ, ಗೂಂಡಾಗಿರಿ, ಹಲ್ಲೆ, ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು, ಭಯೋತ್ಪಾದನೆ, ಬಡವ-ಶ್ರೀಮಂತರ‌ ನಡುವಿನ ಅಧಿಕ‌ ಎನ್ನಿಸುವ ಅಂತರ, ಲಂಚಗುಳಿತನ, ಸ್ವಜನಪಕ್ಷಪಾತ ಮುಂತಾದ‌ ಭ್ರಷ್ಟಾಚಾರದ ಪೈಶಾಚಿಕ ಬಾಹುಗಳು ದೇಶದ‌ ಆಂತರಿಕ ಮತ್ತು ನೆರೆಯ ರಾಷ್ಟ್ರಗಳಿಂದ ಆಗುತ್ತಿರುವ ಅನಗತ್ಯ ಕಿರಿಕಿರಿಗಳಿಂದಾಗಿ ಬಾಹ್ಯದಿಂದಲೂ ಭದ್ರತೆಗೆ ಆತಂಕ ತಂದೊಡ್ಡಿ ಅಲುಗಾಡಿಸುತ್ತಿರುವಾಗ ಪ್ರಜೆಗಳು ಆರಿಸಿ ಕಳಿಸಿರುವ ಪ್ರತಿನಿಧಿಗಳು ಮುಂದಿನ ಚುನಾವಣೆಗಳಲ್ಲಿ ಅಧಿಕಾರ ಉಳಿಸಿಕೊಳ್ಳಲು ಅಥವಾ ಹಿಡಿಯಲು ಯಾವುದೆ ರೀತಿಯ ಮಾರ್ಗವನ್ನೂ ಹಿಡಿಯಲು ಸನ್ನದ್ಧರಾಗಿರುವುದ‌ನ್ನು ಕಂಡಾಗ ಪ್ರಜಾಪ್ರಭುತ್ವ ಆತಂಕದಲ್ಲಿದೆ ಎಂದು ಅನ್ನಿಸದೆ‌ ಇರದು. 

ಇದೆಲ್ಲದರ ನಡುವೆ ನಮಗಿರುವ ಆಶಾಕಿರಣವೆಂದರೆ ಮಕ್ಕಳು ಮತ್ತು ಯುವಜನರು. ಆದರೆ ಅಲ್ಲೂ ನಮಗೆ ತುಸು ನಿರಾಸೆಯೆ ಇದೆ ಅನ್ನಿಸುತ್ತದೆ. ಗಣರಾಜ್ಯ ಮತ್ತು ಸಂವಿಧಾನದ ಕುರಿತಾಗಿ ಯುವಜನರಿಗಾಗಿ ಒಂದು ವೆಬಿನಾರ್ ಮಾಡುವ ಎಂದು ಆಯ್ದ ಕೆಲವು ಯುವಕ-ಯುವತಿಯರನ್ನು ಮಾತನಾಡಿಸುವಾಗ ಅನೇಕರಿಗೆ ಗಣರಾಜ್ಯವನ್ನು ಯಾಕೆ ಆಚರಿಸಲಾಗುತ್ತಿದೆ ಎಂಬ ಅರಿವು ಇಲ್ಲದಿರುವುದು ಕಂಡು ಬಂದಿತು. ಇದಕ್ಕೆ ಯಾರನ್ನು ದೂರುವುದು? ಅಧ್ಯಯನಶೀಲತೆಯ ಭೀಕರ ಬರ ನಮ್ಮೆಲ್ಲರಿಗೂ ಬಡಿದಿದೆ. ಎಲ್ಲರೂ ಕೇವಲ ಮಾಹಿತಿಗಳನ್ನು ಪಡೆಯಲು ಮತ್ತು ಬಿತ್ತುವ ಧಾವಂತದಲ್ಲಿರುವಂತಾಗಿದೆ‌. ಮಕ್ಕಳಿಗೆ ಇಡಿ ದೇಶವನ್ನು ಮುನ್ನೆಡೆಸುವ ಸಂವಿಧಾನವನ್ನು ಹಾಗೂ ಅದರ ಆಶಯಗಳನ್ನು ತಿಳಿಸಲು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚಿನ ಅವಕಾಶವಾಗಲಿಲ್ಲ. ನಮ್ಮ ಧರ್ಮ ಗ್ರಂಥಗಳ ಶ್ಲೋಕಗಳು ಹಾಗೂ ಕವಿತೆಗಳನ್ನು ಬಾಯಿಪಾಠ ಮಾಡಿಸುವ ಜೊತೆಗೆ ಕನಿಷ್ಠ ಸಂವಿಧಾನದ ಪ್ರಸ್ತಾವನೆಯನ್ನಾದರೂ ಬಾಯಿಪಾಠ ಮಾಡಿಸುವ ಗೋಜಿಗೆ ಹೋಗಲಿಲ್ಲ. ಅದರ ಆಶಯಗಳನ್ನು ತರಗತಿಯ ಕೋಣೆಗಳಲ್ಲಿ ಪರೀಕ್ಷೆಗಳಿಗಾಗಿ ಎನ್ನುವಂತೆ‌ ಬೋಧಿಸಲಷ್ಟೆ‌ ಸೀಮಿತಗೊಳಿಸಲಾಯಿತು. ರಾಜಕೀಯ ಪ್ರಜ್ಞೆಯನ್ನು ಉಂಟುಮಾಡುವ, ಸಾಮಾಜಿಕ ಜವಾಬ್ದಾರಿಯ ದೀಕ್ಷೆಕೊಡುವ, ಆರ್ಥಿಕ ಶಿಸ್ತನ್ನು ಹೇಳಿಕೊಡುವ ಯಾವ ಅಂಶಗಳೂ ನಮ್ಮ ಶಾಲಾ-ವಿಶ್ವವಿದ್ಯಾನಿಲಯಗಳ ಪಠ್ಯಗಳಲ್ಲಿ ಪರಿಣಾಮಕಾರಿಯಾಗಿ ಮೂಡಿಬರಲಿಲ್ಲ. ಪ್ರಾಯಶಃ ಈ ಎಲ್ಲಾ ಅಂಶಗಳಿಂದಾಗಿ ನಮಗೆ ಅಗತ್ಯವಿರುವ ಪ್ರಜಾಪ್ರಭುತ್ವದ ನೈಜ ಮಾದರಿಯನ್ನು ಪಡೆಯಲು ಸಾಧ್ಯವಾಗಿಲ್ಲ. 

ಪ್ರಜಾಪ್ರಭುತ್ವದ ಕುರಿತಾದ ಎಲ್ಲಾ ಆತಂಕಗಳು ಮತ್ತು ಅಪಾಯಗಳ ನಡುವೆ ನಮಗೆ ಈಗಲೂ ಇರುವ ಏಕೈಕ ಆಶಾಕಿರಣವೆಂದರೆ ನಮ್ಮ ಸಂವಿಧಾನ ಮತ್ತು ಯುವ ತಲೆಮಾರು. ಸಂವಿಧಾನದ ಪ್ರಸ್ತಾವನೆಯಿಂದ ಮೊದಲ್ಗೊಂಡು ಕೊನೆಯವರೆಗಿನ ಪ್ರತಿ ಸಾಲಿನ ಆಶಯವನ್ನೂ ಸರಳವಾಗಿ ಯುವಜನರಿಗೆ ಬೋಧಿಸುವಂತಾದರೆ ಹಾಗೂ ಅವರು ಅದನ್ನು ಸ್ವಯಂ ಅಧ್ಯಯನ ಮಾಡುವುದಾದರೆ ಪ್ರಜಾಪ್ರಭುತ್ವದ ನೈಜ ಸ್ವರೂಪ ಮತ್ತು ಸೌಂದರ್ಯವು ಅವರಿಗೆ ಮನದಟ್ಟಾಗುತ್ತದೆ.  ಅದರ‌ ಆಶಯದ ಮೇಲೆಯೇ ಎಲ್ಲವೂ ನಡೆದರೆ ಬರುವ ದಿನಗಳಲ್ಲಾದರೂ ಗಾಂಧೀ, ಅಂಬೇಡ್ಕರ್ ಮುಂತಾದ ದಾರ್ಶನಿಕರು ಕಂಡ ಕನಸಿನಂತೆ ದೇಶಕ್ಕೆ ಭದ್ರ ಆಡಳಿತ ವ್ಯವಸ್ಥೆ ಲಭ್ಯವಾಗುತ್ತದೆ.

-ಪ್ರಸನ್ನಕುಮಾರ್ ಕೆರಗೋಡು

Saturday, 11 December 2021

ಕೇತೇದ್ಯಾವರ ಕನ್ನೇರಿ ಪೋಡಿನ ಹಸಿ‌ರ ಬಗಲಲ್ಲಿ...

 ಕೇತೇದ್ಯಾವರ ಕನ್ನೇರಿ ಪೋಡಿನ ಹಸಿ‌ರ ಬಗಲಲ್ಲಿ...

ಅವರ ನೆಲಮೂಲದ ಸಂಸ್ಕೃತಿ ಉಳಿದು ಅವರಿಗೊಂದು ಹಸನು ಬದುಕು‌‌ ಸಿಗಲಿ ಎಂಬ ಹಾರೈಕೆಗಳು ಪ್ರಯೋಜನಕ್ಕೆ‌ ಬಾರವು. ಅದಕ್ಕೆ ಕ್ರಿಯಾದ ಕೆಲಸದ ವ್ಯಾಪ್ತಿಯನ್ನು ನಗರ, ಸ್ಲಮ್ಮು, ಹಳ್ಳಿಗಳ ಜೊತೆಗೆ ಅಡವಿಯೊಳಗಿನ ಮಂದಿಗೂ ವಿಸ್ತರಿಸಬೇಕು ಅಂತ ನಿರ್ಧರಿಸಿದೆ. ನನ್ನ ಯುವ ತಂಡದೊಡನೆ ಚರ್ಚಿಸಿ ಕಾರ್ಯಪ್ರವೃತ್ತವಾಗಬೇಕಷ್ಟೆ!




ಗೊರು ಗೊರುಕನಾ....ಗೊರು ಗೊರುಕನಾ..ಅನ್ನುವ ಹಾಡಿನ‌ ಲಯಕ್ಕೆ ಹೆಂಗಳೆಯರು‌ ಹೆಜ್ಜೆ ಹಾಕುತ್ತಿದ್ದರೆ ಇವರ ನೃತ್ಯಕ್ಕೆ ಸುತ್ತಲೂ ಇದ್ದ ದಟ್ಟನೆಯ ಹಸಿರು ತೊನೆದಾಡುತ್ತಿತ್ತು. ಸುಲಲಿತವಾಗಿ ಬರುತ್ತಿದ್ದ ಎದೆಯ ಹಾಡು-ಅಭಿವ್ಯಕ್ತಿಗೆ ಅವರ ಹೆಜ್ಜೆಗಳು ತಮಗೆ ತಾವೆ ಲಯ‌ ಕಂಡುಕೊಳ್ಳುತ್ತಿದ್ದವು. ಕೆಂಪನೆ ನೆಲದ ಜಗಲಿಯ ಮೇಲೆ ಸುಮ್ಮನೆ ಏಳೆಂಟು ಜನ ಮಹಿಳೆಯರೊಡನೆ ಅವರ ಬದುಕು-ಬವಣೆಗಳ ಕುರಿತಾಗಿ ಮಾತು-ಕಿವಿಯಾಗಿದ್ದ‌ ನನಗೆ‌ ಅದೆ‌ ಪೋಡಿನ‌ ಮುಖಂಡರೊಬ್ಬರು‌ "ಸಾರ್ ಹಾಡು ಹಾಡಿಸಿ, ಡ್ಯಾನ್ಸ್ ಮಾಡಿಸಿ" ಎಂದು ಚುಚ್ಚಿದರು. ಜನಪದದ ಹಾಡು‌-ನೃತ್ಯ ಅಂದ ಮೇಲೆ‌ ಬಿಡುವುದೆಂತು ಅಂತ ಅವರಿಗೆ ಕೋರಿದ‌ ಕೂಡಲೆ ಹಿಂದು ಮುಂದು‌ ನೋಡದೆ ಧ್ವನಿಯೇರಿಸಿ ಹಾಡಲು ಶುರುವಿಟ್ಟುಕೊಂಡು‌ ನಂತರ‌ ಅದೆ ಹಾಡಿಗೆ ಹೆಜ್ಜೆಯನ್ನೂ‌ ಹಾಕಿದರು. 


ಕನ್ನೇರಿ ಕಾಲೋನಿ, 'ಕ್ಯಾತೆದೇವರ ಗುಡಿ' ಯ ಬೆಟ್ಟ ಸಾಲುಗಳ ತಣ್ಣನೆಯ ಗಾಳಿಗೆ ಮೈಯೊಡ್ಡಿ ಸದಾ ಲವಲವಿಕೆಯಿಂದ ಇರುವ ೨೦೦-೨೫೦ ಬುಡಕಟ್ಟು ಕುಟುಂಬಗಳನ್ನು ಸಲಹುತ್ತಿರುವ ಒಂದು ಪೋಡು. ಬಿಳಿಗಿರಿ ಬನದಲ್ಲಿನ ಎಲ್ಲಾ ಪೋಡುಗಳ ಹಾಗೆ ಇದೂ ಕೂಡ ಒಂದು. ಊರ ತುಂಬಾ ಓಡಾಡುತ್ತಿದ್ದ ಹಾಗೆ ಗಮನ ಸೆಳೆದದ್ಧು ಪ್ರತಿ ಮನೆಯ ಮುಂದಿನ ರಸ್ತೆಗಳಲ್ಲಿ ಬಿಸಿಲಿಗೆ ಹರಡಿದ್ದ ಬಿಳಿಯ ಕಾಫಿ ಬೀಜ ಹಾಗೂ ಸ್ವಚ್ಛ ಬೀದಿಗಳು. ಖಾಲಿ‌ ಜಾಗವಿದ್ದೆಡೆಯೆಲ್ಲಾ ತುಂಬಿಕೊಂಡಿದ್ದ ಬಾಳೆ, ಸೀಬೆ, ತರಕಾರಿ, ಸೊಪ್ಪು ಮುಂತಾದವುಗಳು. ಓಡಾಡುತ್ತಿದ್ದ ಹಾಗೆಲ್ಲಾ ದೊಡ್ಡವರು-ಮಕ್ಕಳ ಕುತೂಹಲಭರಿತ ಕಣ್ಣುಗಳು ಮಾತ್ರ ನಮ್ಮನ್ನು ಸೆಳೆಯುತ್ತಿದ್ದವು. ಸಮುದಾಯ‌ ಶೌಚಾಲಯ, ಅಂಗನವಾಡಿ, ನಿರ್ಮಾಣ ಹಂತದ ಸಮುದಾಯ ಭವನ, "ಅಡವಿ" ಉತ್ಪನ್ನಗಳ ಗೋಡೋನ್, ಊರಿಗೆ ಅಂಟಿಕೊಂಡ ಹಾಗೆ ಇರುವ ಕಾಫೀ ತೋಟ, ಕಾಫೀ ಹಣ್ಣಿನಿಂದ ಬೀಜ‌ ಬೇರ್ಪಡಿಸುವ ಯಂತ್ರ ಮುಂತಾದವುಗಳು ಅವರ ಶಿಸ್ತಿನ‌ ಜೀವನಕ್ಕೆ ಕನ್ನಡಿಯಾದ ಅನೇಕಗಳು. 


ಮಾಮೂಲಿನ ಹಾಗೆ‌ ಮನರೇಗ ಕೂಲಿ ಸರಿಯಾಗಿ‌ ಸಿಗುತ್ತಿಲ್ಲ, ಬ್ಯಾಂಕ್ ಖಾತೆಯ‌ ಕ್ಯಾತೆಗಳು, ಓದಿದವರಿಗೆ ಉದ್ಯೋಗವಿಲ್ಲ ಎನ್ನುವ ಒಂದೆರಡು ಆಕ್ಷೇಪಣೆಗಳನ್ನು ಹೊರತುಪಡಿಸಿದರೆ ಉಳಿದ‌ ಮಾತುಗಳೆಲ್ಲಾ ಧನಾತ್ಮಕವಾಗಿ ಜೀವನೋತ್ಸಾಹ ಉಕ್ಕಿಸುವ ಅಂಶಗಳೆ ಆಗಿದ್ದವು. ಅದೆಲ್ಲವನ್ನೂ ನೋಡುತ್ತಾ ಕೇಳುತ್ತಿದ್ದರೆ ಅದೆಷ್ಟೊ ಕಷ್ಟ-ಸಂಕಷ್ಟಗಳನ್ನು ಇವರು ಅದು ಹೇಗೆ‌‌ ನುಂಗಿಕೊಂಡು‌ ಬದುಕಿದ್ದಾರೆ ಆನ್ನಿಸಿತು. ದಟ್ಟ ಅಡವಿಯೊಳಗಿನ ಬದುಕು ಕೊರತೆಗಳ ಜೊತೆಯೆ ಬದುಕಲು ಇವರಿಗೆ ಅಷ್ಟು ಸಹನೆ ಕಲಿಸಿಬಿಟ್ಟಿರಬೇಕು!

ಎಲ್ಲಾ ಪೋಡಿಗೆ ಇರುವ ಹಾಗೆ ಇಲ್ಲಿಗೂ‌ ಕೋನೂರೇಗೌಡ ಅಂತ ಯಜಮಾನರಿದ್ದಾರೆ. ಶಾಲಾ ಶಿಕ್ಷಣವನ್ನೇನೂ ಅವರು‌ ಪಡೆದ ಹಾಗೆ‌ ಕಾಣಲಿಲ್ಲ. ಆದರೆ ಬದುಕಿನ ಶಿಕ್ಷಣ ಅವರ ಭಾಷೆ, ಧಿರಿಸು, ವರ್ತನೆ, ಸಹನೆ, ನಾಯಕತ್ವದ ಗುಣವನ್ನು ಚೆನ್ನಾಗಿಯೆ ಕಲಿಸಿದೆ. ಇಡಿ ಪೋಡಿನ‌ ಎಲ್ಲಾ‌ ವಿಷಯಗಳ‌ ಮಾಹಿತಿ ಅವರ ಬಾಯಲ್ಲಿ ಇವೆ. ಅವರ ಪೋಡಿಗೆ‌ ಕನ್ನೇರಿ ಎಂದು‌ ಹೆಸರು ಬರಲು‌ ಕಾರಣವಾದ ದೃಷ್ಟಾಂತವನ್ನು ಸ್ವಾರಸ್ಯವಾಗಿ ಹೇಳುವ ಇವರು ಊರಿನಲ್ಲಿ ಯಾವುದೆ ದೊಡ್ಡ ಅಪರಾಧಗಳು‌ ನಡೆಯುವುದಿಲ್ಲ, ನಡೆಯುವ ಸಣ್ಣಪುಟ್ಟವುಗಳನ್ನು ಊರ‌ಲ್ಲೆ‌ ಮಾತುಕತೆ ಮೂಲಕವೇ‌ ಬಗೆ ಹರಿಸಲಾಗುವುದು, ಅಕಸ್ಮಾತ್ ಠಾಣೆಯವರೆಗೂ‌ ಹೋದರೆ ಪೋಲಿಸರು‌ ಕೂಡ ತಮ್ಮನ್ನು ಕರೆಸಿಯೆ ಬಗೆಹರಿಸಿ ಕಳಿಸುತ್ತಾರೆ ಎಂದು‌ ವಿಶ್ವಾಸದಿಂದ ಹೇಳುವಾಗ ತಮ್ಮ ನಲವತ್ತು ವರ್ಷಗಳ ಯಜಮಾನಿಕೆಯನ್ನು ಹೆಮ್ಮೆಯಿಂದ ನೆನೆಯುತ್ತಾರೆ. 


ಇಡಿ ಪೋಡಿನ ಬಗ್ಗೆ ಸಮಗ್ರವಾಗಿ ಯೋಚಿಸುವಾಗ ಅಲ್ಲಿನ ಆರ್ಥಿಕ ಸ್ಥಿತಿ‌ ಕಣ್ಮುಂದೆ‌ ನಿಲ್ಲುತ್ತದೆ. ಸರಕಾರದ ಹಲವು ಯೋಜನೆಗಳು ಇಲ್ಲಿಗೆ ತಲುಪಿದ್ದರೂ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವುದಾದರೆ ಹಾಗೂ ಅದನ್ನು ಇವರು ಸಮರ್ಪಕವಾಗಿ ಬಳಸಿಕೊಂಡರೆ ಚೂರು ಹೆಚ್ಚೇ ಸುಧಾರಣೆ ಕಾಣಬಹುದು. ಊರಲ್ಲಿರುವ ಮಹಿಳೆಯರ ಮೂರು ಸ್ವಸಹಾಯ ಸಂಘಗಳು ಮತ್ತಷ್ಟು ವೃದ್ದಿಸಿ ಅವುಗಳೆಲ್ಲವೂ ಆರ್ಥಿಕ‌‌ ಸ್ವಾವಲಂಬನೆ ಕಡೆ ಕೆಲಸ ಮಾಡುವ‌ ಅಗತ್ಯವಿದೆ ಅನ್ನಿಸಿತು. ಒಂದು‌ ಸಮಾಧಾನಕರ ವಿಷಯ ಏನೆಂದರೆ ಊರಿನ ಕಾಫಿ ತೋಟಗಳ ಕೆಲಸಗಳು ಮನರೇಗ ವ್ಯಾಪ್ತಿಗೆ‌ ಬಂದಿರುವುದು. ವಾರ್ಷಿಕ ಸಿಗಬಹುದಾದ‌ ನಿಗಧಿತ‌ ಕೆಲಸದ ದಿನಗಳ‌ ಕೂಲಿ‌ ಸಿಗುವ ಕಾರಣ‌ ಅನೇಕ‌ ಕುಟುಂಬಗಳಿಗೆ ಜೀವನ‌ ಸಾಗಿಸಲು ಅನುಕೂಲವಾಗಿದೆ. ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಸಂಸ್ಕರಿಸಿ ಮಾರಾಟ‌ ಮಾಡಲು ಒಂದು ಒಳ್ಳೆಯ ಮಾರುಕಟ್ಟೆ‌ ವ್ಯವಸ್ಥೆ ಇದ್ದರೂ ಅದು ಇನ್ನಷ್ಟು ವಿಸ್ತ್ರತವಾಗಿ ವಿಸ್ತರಣೆ ಆದರೆ ಮತ್ತಷ್ಟು ಕುಟುಂಬಗಳ ಆರ್ಥಿಕ‌ ಸಮಸ್ಯೆ ನೀಗುತ್ತದೆ. 



ಮನಕಲಕುವ ವಿಷಯವೇನೆಂದರೆ ಶೈಕ್ಷಣಿಕವಾಗಿ ಅಷ್ಟೇನೂ‌ ಪ್ರಗತಿಯಾಗದಿರುವುದು. ಮಾತನಾಡಿಸಿದ ಅಷ್ಟೂ ಜನರಲ್ಲೂ ಶಿಕ್ಷಣದ ಕುರಿತಾಗಿ‌ ಬೇಸರದ‌ ಭಾವ ಇರುವುದು ಕಂಡು ಬರುತ್ತದೆ. ಕಾರಣ ಹಾಗೆ ಶಿಕ್ಷಣ ಪಡೆದ ಮಕ್ಕಳಿಗೆ ಉದ್ಯೋಗ ಸಿಗುತ್ತಿಲ್ಲ ಎನ್ನುವುದು.

ಆದರೂ ಅವರ್ಯಾರೂ ಆ ಬಗ್ಗೆ ಪೂರ್ಣ ಆಸಕ್ತಿ ಕಳೆದುಕೊಂಡಿಲ್ಲದಿರುವುದು ಸಮಾಧಾನಕರ ವಿಷಯ. ಮಕ್ಕಳಿಗೆ ಕೆ.ಗುಡಿಯಲ್ಲಿರುವ ಆಶ್ರಮ‌ ಶಾಲೆಯೆ ಆರಂಭಿಕ‌ ಶಿಕ್ಷಣಕ್ಕೆ ಇವರಿಗಿರುವ ಆಧಾರ. ಅದಾದ‌ ನಂತರ ಬಿಳಿಗಿರಿ ಬೆಟ್ಟ ಮತ್ತು ಯಳಂದೂರು ಮುಂತಾದ‌ ಕಡೆ ಹೈಸ್ಕೂಲು, ಪಿಯುಸಿ ಓದುತ್ತಿದ್ದಾರೆ ಎಂದು‌ ನಿರ್ಭಾವುಕವಾಗಿ‌ ನುಡಿಯುತ್ತಾರೆ ಅವರ‌ ಹೆತ್ತವರು. "ಕಾಲೇಜಿನ ಯೂನಿಪಾರ್ಮು ಕೊಡಿಸಕ್ಕಾಗದೆ ಮಗನನ್ನು ಕಾಲೇಜು‌ ಬಿಡುಸಿಬಿಟ್ಟೆ ಸಾ" ಎಂದು ಹೇಳುವಾಗಿನ ಮಾದೇವಮ್ಮನ ಮುಖಭಾವ ನೋಡುವಾಗ ಮನಸ್ಸು ಸಂಕಟಕ್ಕೀಡಾಗುತ್ತದೆ. ಏನಾದರಾಗಲಿ‌ ಕಾಡಮಕ್ಕಳ ಜೀವನ‌ ಪ್ರೀತಿ ನಮ್ಮನ್ನು ಅಚ್ಚರಿಗೊಳಿಸುತ್ತದೆ. ಅವರ ನೆಲಮೂಲದ ಸಂಸ್ಕೃತಿ ಉಳಿದು ಅವರಿಗೊಂದು ಹಸನು ಬದುಕು‌‌ ಸಿಗಲಿ ಎಂಬ ಹಾರೈಕೆಗಳು ಪ್ರಯೋಜನಕ್ಕೆ‌ ಬಾರವು. ಅದಕ್ಕೆ ಕ್ರಿಯಾದ ಕೆಲಸದ ವ್ಯಾಪ್ತಿಯನ್ನು ನಗರ, ಸ್ಲಮ್ಮು, ಹಳ್ಳಿಗಳ ಜೊತೆ ಅಡವಿಯೊಳಗಿನ ಮಂದಿಗೂ ತಲುಪಬೇಕು ಅಂತ ನಿರ್ಧರಿಸಿದೆ. ಕಾರ್ಯಪ್ರವೃತ್ತವಾಗಬೇಕಷ್ಟೆ!



ಕಳೆದ ವಾರದ ರಜೆಯೊಂದನ್ನು ಸಂಪೂರ್ಣ ಸಾರ್ಥಕವಾಗಿ‌ ಕಳೆದ ಭಾವದೊಡನೆ ಪೋಡು ಬಿಡುವಾಗ ಅವರೆಲ್ಲ‌ ನೆನಪುಗಳನ್ನು ಹೊತ್ತು ತಂದ‌ಭಾವ ನನ್ನ‌ ಮತ್ತು ನನ್ನ ಮಕ್ಕಳದು. 

-ಪ್ರಸನ್ನಕುಮಾರ್ ಕೆರಗೋಡು




Tuesday, 3 December 2019

ಸಹಾನುಭೂತಿಯ ಮನಸ್ಸು ಮತ್ತು ಸಹಾಯದ ಒಂದು ಕೈನ ಚಮತ್ಕಾರ

ಸಹಾನುಭೂತಿಯ ಮನಸ್ಸು ಮತ್ತು ಸಹಾಯದ 
ಒಂದು ಕೈನ ಚಮತ್ಕಾರ


 ದೃಷ್ಟಿ ಮಾಂದ್ಯರ ಶೈಕ್ಷಣಿಕ ಮತ್ತು ಔದ್ಯೋಗಿಕ ಏಳಿಗೆಯ ಸಹಾಯಕ ಬರಹಗಾರರ ಕಾರ್ಯ ಶ್ಲಾಘನೀಯ

ಅಂತರರಾಷ್ಟ್ರೀಯ ಅಂಗವಿಕಲರ (ವಿಶೇಷ ಚೇತನರು) ದಿನ ಮತ್ತೆ ಬಂದಿದೆ. 1992 ರಿಂದ ಪ್ರತಿ ಡಿಸೆಂಬರ್ 3 ನ್ನು ಪ್ರಪಂಚದಾದ್ಯಂತ ಇರುವ ಎಲ್ಲ ವಿಶೇಷ ಚೇತನರಿಗೆ ಅವರ ಹಕ್ಕುಗಳನ್ನು ಮನವರಿಕೆ ಮಾಡಿಕೊಟ್ಟು ವಿಶ್ವಾಸ ತುಂಬುವ ಕಾರಣದಿಂದ‌ ವಿಶ್ವಸಂಸ್ಥೆಯು ತನ್ನ ಹದಿನೇಳು ಸುಸ್ಥಿರ ಅಭಿವೃದ್ಧಿಯ ಅಂಶಗಳಲ್ಲಿ ಒಂದನ್ನಾಗಿಸಿಕೊಂಡು ಕಾರ್ಯ ನಿರ್ವಹಿಸುವಂತೆ ತನ್ನ ಸದಸ್ಯತ್ವ ಹೊಂದಿರುವ 193 ರಾಷ್ಟ್ರಗಳಿಗೆ ಸೂಚನೆ‌ ನೀಡುತ್ತಿದೆ. ಈ ವರ್ಷದ ಧ್ಯೇಯ ವಾಕ್ಯ Promoting the participation of persons with disabilities and their leadership: taking action on the 2030 Development Agenda ಹೇಳುವಂತೆ ನಾಯಕತ್ವಕ್ಕೆ ಎಲ್ಲಾ ವಿಶೇಷ ಚೇತನರನ್ನು ತೆರೆದುಕೊಳ್ಳುವಂತೆ ಮಾಡಲು ಮತ್ತು 2030 ರೊಳಗೆ ಯಾರನ್ನೂ ಬಿಡದೆ ಎಲ್ಲರನ್ನೂ ಒಳಗು ಮಾಡಿಕೊಳ್ಳುವ ಉದ್ದೇಶ ಸಕಾಲಿಕವಾದುದು. ಮುಖ್ಯ ವಾಹಿನಿಯಿಂದ ಬೇರೆಯದೆ ಆದ ಡೊಮೈನ್‌ನಲ್ಲಿ ಅವರನ್ನಿಟ್ಟು ನೋಡುವ ಪ್ರವೃತ್ತಿ ಅನೇಕ ಮಂದಿಯಲ್ಲಿ ಈಗಲೂ‌ ಕಾಣಬಹುದಾದ ಸ್ಥಿತಿಯೇನೂ ಕಡೆಮೆಯಾಗಿಲ್ಲ.

ಈ ಸಂದರ್ಭದಲ್ಲಿ ಒಂದನ್ನು ಇಲ್ಲಿ ಅಭಿಮಾನ ಮತ್ತು ಪ್ರೀತಿಯಿಂದ ಬರೆಯಲೆಬೇಕು. ಕಳೆದ ಎರಡು ವರ್ಷಗಳ ಹಿಂದೆ ನಾನು ಕ್ರಿಯಾ-ಸಮಾಜದೆಡೆಗೆ ಯ ಒಂದು ಘಟಕ #KriyaHand ಪ್ರಾರಂಭಿಸಿ ಅಂಧ ವಿದ್ಯಾರ್ಥಿಗಳಿಗೆ ಪರೀಕ್ಷಾ ಬರಹ ಸಹಾಯಕರಾಗಿ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡಬಹುದಾದ ಯುವಜನರಿಗೆ ಕರೆ ನೀಡಿದಾಗ ಬಂದ ಧನಾತ್ಮಕ ಪ್ರತಿಕ್ರಿಯೆಗೆ ನನ್ನ ಮನಸ್ಸು ತುಂಬಿ ಬಂದಿತ್ತು. ಆನಂತರ ನಡೆದದ್ದೆಲ್ಲವೂ ನನ್ನ ಮಿತಿಗೆ ಸಿಗಲೆ ಇಲ್ಲ. ಇದೆ ಹೆಸರಿನ ವಾಟ್ಸಪ್ ಗುಂಪೊಂದು ಶುರುವಾಗುತ್ತದೆ. ಅಲ್ಲಿ ಯಾವ ಪರೀಕ್ಷೆ ಮುಂದೆ ಬರುತ್ತದೆ ಎಂದು ಚರ್ಚೆಯಾಗುತ್ತದೆ. ಮೈಸೂರು ಮಾತ್ರವಲ್ಲದೆ ಅಕ್ಕಪಕ್ಕದ ನಗರ ಪಟ್ಟಣಗಳಲ್ಲಿ ಯಾವ ಯಾವ ಅಂಧ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಎಂಬುದು ಹಂಚಿಕೆಯಾಗುತ್ತದೆ. ಅವರಿಗೆ ಪರೀಕ್ಷಾ ಬರಹ ಸಹಾಯಕರಾಗಿ ಯಾರು ಯಾರು ಹೋಗಬೇಕು ಎನ್ನುವುದು ನಿರ್ಧಾರವಾಗುತ್ತದೆ. ಅವರವರು ಆಯಾ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಆ ಅಂಧ ಅಭ್ಯರ್ಥಿಗೆ ಪರೀಕ್ಷೆ ಬರೆಯುತ್ತಾರೆ. ಆ ಸಂತೋಷವನ್ನು ಮತ್ತೆ ಗುಂಪಿನಲ್ಲಿ ಹಂಚಿಕೊಳ್ಳುತ್ತಾರೆ. ಎಲ್ಲರೂ ಖುಷಿ ಪಡುತ್ತಾರೆ. ಯಾವುದೋ ಸಾರ್ಥಕ ಅನುಭೂತಿಯ ಆನಂದ ಅನುಭವಿಸುತ್ತಾರೆ.


ಪರೀಕ್ಷೆಯ ಸಹಾಯ ಪಡೆದುಕೊಂಡ ಕೆಲವು ಅಂಧ ವಿದ್ಯಾರ್ಥಿಗಳು ನನಗೆ ಕರೆ ಮಾಡುತ್ತಾರೆ ಅಥವಾ ಸಂದೇಶ ಕಳಿಸುತ್ತಾರೆ. ಆ ಅಣ್ಣ-ಅಕ್ಕ-ತಮ್ಮ-ತಂಗಿಗಳಿಗೆ ಮನಪೂರ್ವಕ ಧನ್ಯವಾದ ಅರ್ಪಿಸಿ ನಾನು ಪಾಸಾಗುವೆ ಸರ್ ಎಂದು ನಗುನಗುತ್ತಾ ಕರೆ ಕಡಿತಗೊಳಿಸುತ್ತಾರೆ. ಅದೆಷ್ಟೋ ಮಂದಿ ದೃಷ್ಟಿ ಮಾಂದ್ಯ ಬಂಧುಗಳು ಬರಹ ಸಹಾಯಕರಿಗೂ ಕ್ರಿಯಾಗೂ ಧನ್ಯವಾದ ಹೇಳುತ್ತಾ ಗದ್ಗದಿತರಾಗಿದ್ದೂ ಇದೆ. ಪಿ.ಯು.ಸಿ, ಪದವಿಯ ಎಲ್ಲಾ ಕಾಂಬಿನೇಷನ್ ಗಳು ಮಾತ್ರವಲ್ಲದೆ SDA,FDA, PDO ಮತ್ತು KAS ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಪರೀಕ್ಷೆ ಸಹಾಯಕರನ್ನಾಗಿ ಬಳಸಿಕೊಂಡಿರುವ ನೂರಾರು ಅಂಧ ವಿದ್ಯಾರ್ಥಿಗಳು ಶೈಕ್ಷಣಿಕ ಪರೀಕ್ಷೆಗಳಲ್ಲಿ ಮಾತ್ರವೆ ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆ ಬರೆಸಿಕೊಂಡು ಉದ್ಯೋಗ ಪಡೆದು ಯಶಸ್ಸು ಕಂಡಿದ್ದಾರೆ. ಹಾಗೆ ಸಹಾಯಕ ಬರಹಗಾರರಾದ ಇವರೆಲ್ಲರಿಗೆ ವಿನಮ್ರ ಕೃತಜ್ಞತೆ ಸಲ್ಲಿಸುತ್ತಾರೆ.

ಈ ಕಾರ್ಯಕ್ಕೆ ಈವರೆಗೆ #KriyaHand ನ ಯಾವೊಬ್ಬ ಕ್ರಿಯಾಶೀಲನೂ ಕ್ರಿಯಾಗೆ ನೆಪ ಮಾತ್ರನಾಗಿರುವ ನನ್ನ ಬಳಿಯಾಗಲಿ ಅಥವಾ ಕ್ರಿಯಾದ ಹಣಕಾಸು ವಿಭಾಗ ನಿರ್ವಹಿಸುವರ ಬಳಿಯಾಗಲಿ ಒಂದು‌ ನಯಾ ಪೈಸೆ‌ ಕೇಳುವುದಿಲ್ಲ. ಅವರ ಸಮಯ, ಶ್ರಮ ಮಾತ್ರವಲ್ಲದೆ ಹಣ‌ ಕೂಡ ಖರ್ಚು ಮಾಡಿಕೊಂಡು ಈ ಅನನ್ಯ ಸೇವಾ ಕಾರ್ಯದಲ್ಲಿ ಆಪ್ತತೆಯಿಂದ ತೊಡಗಿಕೊಳ್ಳುತ್ತಾರೆ‌. ಇವೆಲ್ಲದರ ಜೊತೆ ಕ್ರಿಯಾ ಹಮ್ಮಿಕೊಳ್ಳುವ ಪರಿಸರ ಸಂರಕ್ಷಣೆ, ಬೀದಿ ನಾಟಕ, ಶಾಲಾ ದತ್ತು ಕಾರ್ಯಕ್ರಮ ಮುಂತಾದ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ತಮ್ಮ ಶೈಕ್ಷಣಿಕ ಸಾಧನೆಯಲ್ಲೂ ಹಿಂದೆ‌ ಬೀಳದೆ ಮುಂದುವರೆಯುತ್ತಿರುವುದನ್ನು‌ ಕಾಣುವಾಗ ನನಗೆ ಇವರ ಬಗ್ಗೆ ತೀವ್ರ ಹೆಮ್ಮೆಯಾಗುತ್ತದೆ. #KriyaHand ನಲ್ಲಿ ಅರವತ್ತು ಮಂದಿಗಿಂತ ಹೆಚ್ಚು ಇರುವ ಈ ಹುಡುಗರಲ್ಲಿ ಅನೇಕರು 30-40 ಬಾರಿ ಕೆಲವರು 60-70 ಹಾಗೆಯೆ 105 ಬಾರಿ ಪರೀಕ್ಷೆ ಬರೆದವರೂ ಇದ್ದಾರೆ. ಅದೆಷ್ಟು ಅದಮ್ಯ ಮಾನಸಿಕ‌ ಶಕ್ತಿ ಇವರಿಗಿದೆ ಎಂದು‌ ನಾನು ದಿಗಿಲುಗೊಳ್ಳುತ್ತೇನೆ.

ಇದಷ್ಟು ಮಾತ್ರವಲ್ಲದೆ ಕ್ರಿಯಾ ಸಂಸ್ಥೆಯು ದೃಷ್ಟಿಮಾಂದ್ಯರಿಗೆ ಏರ್ಪಡಿಸುವ ವಿವಿಧ ಕಾರ್ಯಾಗಾರಗಳಲ್ಲೂ ಸಕ್ರಿಯ ಸ್ವಯಂ ಸೇವಕರಾಗಿ ಪಾಲ್ಗೊಳ್ಳುತ್ತಾರೆ. ಭವಿಷ್ಯದಲ್ಲಿ ಇಂಥವರಿಗೆ ಎಂದು ಪಠ್ಯದ ಆಡಿಯೊ ಬುಕ್ ತರುವುದು ಮತ್ತು ಈ ಭಾಗದ ಎಲ್ಲಾ ದೃಷ್ಟಿ ಮಾಂದ್ಯ ಶಾಲೆಗಳು, ವಸತಿ ನಿಲಯಗಳಿಗೆ ತೆರಳಿ ಗುರಿ ನಿರ್ಣಯ, ವ್ಯಕ್ತಿತ್ವ ವಿಕಸನ, ಜೀವನ ಕೌಶಲ, ಉದ್ಯೋಗ ಮಾರ್ಗದರ್ಶನ ಮುಂತಾದ ವಿಷಯಗಳ ಮೇಲೆ ಕಾರ್ಯಕ್ರಮ ನಡೆಸುವ ಯೋಜನೆ‌ ಕೂಡ ರೂಪಿಸುತ್ತಿದ್ದಾರೆ. ಒಟ್ಟಾರೆಯಾಗಿ ಈ‌ ಅಂತರರಾಷ್ಟ್ರೀಯ ವಿಶೇಷ ಚೇತನರ ದಿನದ ಪ್ರಯುಕ್ತ ಈ ಯುವಕ-ಯುವತಿಯರ ಈ ಅನುಕರಣೀಯ ಕೆಲಸವನ್ನು ಠನೆನಸಿಕೊಳ್ಳುವುದು ನನ್ನ ಕರ್ತವ್ಯ ಎಂದು ಭಾವಿಸಿ ಅವರೆಲ್ಲರಿಗೊಂದು ನುಡಿ ನಮನಗಳನ್ನು ಸಲ್ಲಿಸುವೆ.

ಎಲ್ಲರಿಗೂ ಅಂತರರಾಷ್ಟ್ರೀಯ ವಿಶೇಷ ಚೇತನರ ದಿನದ ಶುಭಾಶಯಗಳು


                       -ಪ್ರಸನ್ನಕುಮಾರ್ ಕೆರಗೋಡು

Thursday, 24 October 2019

ಭಾರತ ಹಸಿಯುತ್ತಿದೆ. ಹಸಿವಿನ ಸಮಸ್ಯೆ: ನಿವಾರಣೆ ಹೇಗೆ ?


ಭಾರತ ಹಸಿಯುತ್ತಿದೆ !
ಹಸಿವಿನ ಸಮಸ್ಯೆ: ನಿವಾರಣೆ ಹೇಗೆ ?
ಪ್ರಜಾವಾಣಿಯ ಸಂಗತದಲ್ಲಿ ಪ್ರಕಟವಾದ ಲೇಖನದ ಅನ್ ಎಡಿಟೆಡ್ ಲೇಖನ
ಪ್ರತಿವರ್ಷದಂತೆ ಈ ವರ್ಷವೂ ಜಾಗತಿಕ ಹಸಿವು ಸೂಚ್ಯಂಕದ ವರದಿ ಬಿಡುಗಡೆಯಾಗಿದೆ. ಕಳೆದ ವರ್ಷ 103 ನೇ ಸ್ಥಾನದಲ್ಲಿದ್ದ ಭಾರತ ಪ್ರಸಕ್ತ ವರ್ಷದಲ್ಲಿ 102 ನೇ ಸ್ಥಾನದ ಕೊಂಚ ಏರಿಕೆಯನ್ನು ಕಂಡುಕೊಂಡಿದ್ದರೂ ಹಸಿವು ನಿರ್ಮೂಲನೆಯಲ್ಲಿ ತನ್ನ‌ ನೆರೆಯ ರಾಷ್ಟ್ರಗಳಾದ ಚೀನಾ, ನೇಪಾಳ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕಿಂತ ಕೆಳ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ವಾರ್ಷಿಕ ಸೂಚ್ಯಂಕಕ್ಕೆ ಪರಿಗಣಿಸಲಾದ 117 ರಾಷ್ಟ್ರಗಳಲ್ಲಿ ಭಾರತವು 30.3 ಅಂಕಗಳನ್ನು ಪಡೆದು (ಹೆಚ್ಚು ಅಂಕ ಪಡೆದರೆ ಹಸಿವು ಅಧಿಕ, ಕಡಿಮೆ‌ ಪಡೆದರೆ ಹಸಿವು ಕಡಿಮೆ ಮತ್ತು ಶೂನ್ಯ ಅಂಕ ಪಡೆದರೆ ಹಸಿವು ಮುಕ್ತ ಎಂದರ್ಥ) ಈ ಸ್ಥಾನದಲ್ಲಿ ಬಂದು‌ ನಿಲ್ಲುವುದರ ಮೂಲಕ ಈ ಬಗ್ಗೆ ದೇಶವು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಎಚ್ಚರಿಕೆ‌ ನೀಡಿದೆ. ಆ ಮೂಲಕ ದಕ್ಷಿಣ ಏಷ್ಯಾದ ಬ್ರಿಕ್ಸ್ ರಾಷ್ಟ್ರಗಳಲ್ಲೆ ಅತಿ ಹೆಚ್ಚು ಜನ ಹಸಿವಿನಿಂದ ಬಳಲುತ್ತಿದ್ದಾರೆ ಎಂಬುದು ವ್ಯಕ್ತವಾಗಿರುವುದರಿಂದ ವಿಷಯದ ಗಾಂಭೀರ್ಯವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಪಕ್ಕದ ಚೀನಾ ತನ್ನ ಸಮಗ್ರ ಉತ್ಪಾದಕತೆ ಮತ್ತು ಆರ್ಥಿಕ‌ ಅಭಿವೃದ್ಧಿಯ ಕಾರಣದಿಂದ 25 ನೇ ಸ್ಥಾನದಲ್ಲಿ ಜಾಗ ಪಡೆದುಕೊಂಡಿದ್ದರೆ ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ದೇಶಗಳು ಅಪೌಷ್ಟಿಕತೆ ಮತ್ತು ಮಕ್ಕಳ‌ ಕುಂಟಿತ ಬೆಳವಣಿಗೆಯನ್ನು ತಹಬಂದಿಗೆ ತರುವಲ್ಲಿ ಯಶಸ್ವಿಯಾಗುತ್ತಿರುವ ಕಾರಣ ಕ್ರಮವಾಗಿ 66, 73, 88 ಮತ್ತು 94 ರ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿವೆ. 

ಜಾಗತಿಕ ಹಸಿವು ವರದಿ-2019 ರಲ್ಲಿ ಬೆಲಾರಸ್, ಉಕ್ರೇನ್, ಟರ್ಕಿ, ಕ್ಯೂಬಾ ಮತ್ತು ಕುವೈತ್ ದೇಶಗಳು ಅಗ್ರ ಐದು ಸ್ಥಾನಗಳನ್ನು ಗಳಿಸಿಕೊಂಡು ಮತ್ತಿತರ ಹನ್ನೆರಡು ರಾಷ್ಟ್ರಗಳೊಂದಿಗೆ ಸೂಚ್ಯಂಕದಲ್ಲಿ ಐದಕ್ಕಿಂದ ಕಡಿಮೆ ಅಂಕಗಳಿಸಿ ಅಗ್ರ ಪಟ್ಟ ಪಡೆದುಕೊಂಡಿವೆ. ವಿಶೇಷವೆಂದರೆ ತಮ್ಮ ಆಂತರಿಕ ಕ್ಷೋಬೆಯಂತಹ ಕಾರಣಗಳಿಗಾಗಿಯೆ ಸುದ್ದಿಯಾಗುತ್ತಿದ್ದ ಮಧ್ಯಪ್ರಾಚ್ಯದ ಸಿರಿಯಾ ಮತ್ತು ಪೂರ್ವ ಆಫ್ರಿಕಾದ ಜಿಬೂಟಿ ದೇಶಗಳು ಹಸಿವು ಸೂಚ್ಯಂಕ ವರದಿಯಲ್ಲಿ ಭಾರತಕ್ಕಿಂತ ಉತ್ತಮ ಸಾಧನೆ ತೋರಿರುವುದು ಆ ದೇಶಗಳಲ್ಲಿ ಆಹಾರ ಮತ್ತು ಶಿಶು ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ವಹಿಸಿರುವ ಕಾಳಜಿಯನ್ನು ತೋರುತ್ತದೆ. ಕಳೆದ 2000 ನೇ ಇಸವಿಯಿಂದ ಐರ್ಲೆಂಡ್ ನ ಕನ್ಸರ್ನ್ ವರ್ಲ್ಡ್ ವೈಡ್ ಮತ್ತು ಜರ್ಮನಿಯ ವೆಲ್ಟ್ ಹಂಗರ್ ಹಿಲ್ಫ್ ಎನ್ನುವ ಜಾಗತಿಕ ಸ್ವಯಂ ಸೇವಾ ಸಂಸ್ಥೆಗಳು ಜಂಟಿಯಾಗಿ ಜಾಗತಿಕ ಮಟ್ಟದಲ್ಲಿ ಕೈಗೊಳ್ಳುವ ಈ ಸಮೀಕ್ಷೆಯು ತನ್ನ‌ ಕರಾರುವಕ್ಕುತನಕ್ಕಾಗಿ ಹೆಸರು ಮಾಡಿದೆ. ಸೂಚ್ಯಂಕ ವರದಿಯಲ್ಲಿ ಸದರಿ ಸಂಸ್ಥೆಗಳು ಸಮೀಕ್ಷೆಯ ಆರಂಭದ ವರ್ಷವಾದ 2000 ರಲ್ಲಿ 113 ರಾಷ್ಟ್ರಗಳಲ್ಲಿ ಭಾರತ 83 ನೇ ಸ್ಥಾನದಲ್ಲಿದ್ದರೆ 2019 ರಲ್ಲಿ 117 ರಾಷ್ಟ್ರಗಳಲ್ಲಿ 102 ನೇ ಸ್ಥಾನ ಗಳಿಸಿಕೊಂಡಿರುವುದು ಮತ್ತು ದೇಶದಲ್ಲಿನ ಹಸಿವಿನ ಮಟ್ಟದ ಕುರಿತು ಷರಾ ಬರೆಯುತ್ತಾ "ಗಂಭೀರ" ಎಂದು ವ್ಯಾಖ್ಯಾನಿಸಿವೆ.

ದೇಶದ ಜನಗಳಲ್ಲಿನ ಅಪೌಷ್ಟಿಕತೆ, ಐದು ವರ್ಷಕ್ಕಿಂತ ಕಡಿಮೆ‌ ವಯಸ್ಸಿನ ಮಕ್ಕಳ ಕುಂಠಿತ ಬೆಳವಣಿಗೆ, ಕಡಿಮೆ ತೂಕದ ಮಕ್ಕಳು ಮತ್ತು ಶಿಶುಮರಣ ಪ್ರಮಾಣಗಳ ಸೂಚ್ಯಂಕದಲ್ಲಿ ವ್ಯಕ್ತವಾದ ಅಂಶಗಳನ್ನು ಪರಿಗಣಿಸಿ ನಿರ್ಧರಿಸಲಾಗುವ ಜಾಗತಿಕ ಹಸಿವು ಸೂಚ್ಯಂಕ ವರದಿ ಜಗತ್ತಿನ ವಿವಿಧ ರಾಷ್ಟ್ರಗಳ ಜನಜೀವನ ಮತ್ತು ಆರೋಗ್ಯದ ಸ್ಥಿತಿಗತಿಗಳ  ಮೇಲೆ ಬೆಳಕು ಚೆಲ್ಲುತ್ತದೆ. ಪ್ರಸ್ತುತ ಭಾರತ ಶಿಶುಮರಣ ವಿಭಾಗದಲ್ಲಿ ಮಾತ್ರ ಉತ್ತಮ ಸ್ಥಿತಿಯನ್ನು ಕಾಪಾಡಿಕೊಂಡು‌ ಉಳಿದ ಮೂರು ವಿಭಾಗಗಳಲ್ಲಿ ಗಣನೀಯ ಸಾಧನೆ ತೋರದಿರುವುದರಿಂದ ನಾವು ಅನುಷ್ಠಾನಗೊಳಿಸುತ್ತಿರುವ ಆಹಾರ ಮತ್ತು ಆರೋಗ್ಯ ಸಂಬಂಧೀ ಯೋಜನೆಗಳನ್ನು ಪುನರ್ವಿಮರ್ಶೆಗೆ ಒಳಪಡಿಸಬೇಕಾದ ಅಗತ್ಯವಿದೆ ಎಂಬ ಅಂಶದ ಬಗ್ಗೆ ಚಿಂತನೆ‌ ನಡೆಯಬೇಕಿದೆ. ಭಾರತದಲ್ಲಿ ಶೇ 14.5 ಮಂದಿ‌ ಅಪೌಷ್ಟಿಕತೆಯಿಂದ ಬಳಲುತ್ತಿದ್ದು ಗರ್ಭಾವಸ್ಥೆಯಿಂದಲೆ ಈ ಸಮಸ್ಯೆ ತಲೆದೋರುತ್ತಿದೆ. 9 ರಿಂದ 23 ತಿಂಗಳ ವಯೋಮಾನದ ಶೇ 9.6 ರಷ್ಟು ಮಕ್ಕಳಿಗೆ ಮಾತ್ರ ಅಗತ್ಯ ಪ್ರಮಾಣದ ಆಹಾರ ಮತ್ತು ಪೌಷ್ಟಿಕಾಂಶ ದೊರೆಯುತ್ತಿದ್ದು ಉಳಿದಂತೆ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳೆ ಅಧಿಕವಾಗಿದ್ದಾರೆ. 5 ವರ್ಷದೊಳಗಿನ ಮಕ್ಕಳನ್ನು ಸೂಚ್ಯಂಕಕ್ಕೆ ಪರಿಗಣಿಸುವ ಈ ಸಮೀಕ್ಷೆ ಅಪೌಷ್ಟಿಕತೆಯ ಕಾರಣದಿಂದಾಗಿ ಮಕ್ಕಳಲ್ಲಿ ಕಂಡು ಬರುವ ಕುಂಠಿತ ಬೆಳವಣಿಗೆಯನ್ನು ಗುರುತಿಸಿ ದೇಶದಲ್ಲಿ ಅಗತ್ಯ ಪ್ರಮಾಣದಲ್ಲಿ ಎತ್ತರಕ್ಕೆ ಬೆಳವಣಿಗೆ ಹೊಂದದ ಶೇ 37.8 ರಷ್ಟು ಮಕ್ಕಳಿದ್ದಾರೆ ಎಂದು ತಿಳಿಸಿದೆ. ಇದರೊಂದಿಗೆ ಬೆಳವಣಿಗೆ ಕುಂಠಿತ ಸಮಸ್ಯೆಗೆ ಅನೈರ್ಮಲ್ಯತೆ ಕೂಡ ಕಾರಣವಾಗಿರುವುದರಿಂದ ಸ್ವಚ್ಚ ಭಾರತ ಅಭಿಯಾನ‌ ಈ ವಿಚಾರದಲ್ಲಿ ನಿರೀಕ್ಷಿತ ಫಲ‌ ನೀಡಿಲ್ಲ ಎಂದು ಕೂಡ ವರದಿಯಲ್ಲಿ ಉಲ್ಲೇಖವಾಗಿದೆ. 

ಐದು ವರ್ಷದೊಳಗಿನ ವಯೋಮಾನದ‌ ಕಡಿಮೆ‌ ತೂಕ ಇರುವ ಮಕ್ಕಳನ್ನೂ‌ ಪರಿಗಣನೆಗೆ‌ ತೆಗೆದು‌ಕೊಳ್ಳುವ ಈ ಸಂಸ್ಥೆಗಳು ಜಾಗತಿಕ ಹಸಿವು ಸೂಚ್ಯಂಕಕ್ಕೆ ಒಳಗಾಗಿರುವ 117 ದೇಶಗಳಲ್ಲೆ ಭಾರತದಲ್ಲಿ ಈ ಸಮಸ್ಯೆ ಅತಿ ಹೆಚ್ಚು ಎಂದು ತಮ್ಮ ವರದಿಯಲ್ಲಿ ಉಲ್ಕೇಖಿಸಿವೆ. ಹಾಗೆ‌ ನೋಡಿದರೆ 2008 ರಿಂದ 2012 ರ ಅವಧಿಯಲ್ಲಿ ಈ ಸಮಸ್ಯೆ ಹೊಂದಿದ್ದ ಮಕ್ಕಳ ಪ್ರಮಾಣ16.5 ರಷ್ಟಿದ್ದು ಈಗ ಅದು ಶೇ 20.8 ಕ್ಕೆ ಏರಿಕೆಯಾಗುವ ಮೂಲಕ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ ಎಂದು ತಿಳಿಸಲಾಗಿದೆ. ಸಮಾಧಾನಕರ ಸಂಗತಿಯೆಂದರೆ ಐದು ವರ್ಷದೊಳಗಿನ ಶಿಶುಗಳ ಮರಣ ಪ್ರಮಾಣದಲ್ಲಿ ನಮ್ಮ ದೇಶವು ಗಣನೀಯ ಪ್ರಗತಿ ಸಾಧಿಸಿದ್ದು ಅದು ಕೇವಲ ಶೇ 3.9 ರಷ್ಟಿದ್ದು ಆರೋಗ್ಯ ಸೇವೆಯಲ್ಲಿ ಕೈಗೊಂಡ ಸುಧಾರಣಾ ಕ್ರಮಗಳಿಂದ ಇದು ಸಾಧ್ಯವಾಗಿದೆ ಎಂಬುದನ್ನು ಕೂಡ ವರದಿಯಲ್ಲಿ ಗುರುತಿಸಲಾಗಿದೆ.  ಅದೇನೆ‌ ಇದ್ದರೂ‌ ಇದೆ ಜಾಗತಿಕ ಹಸಿವು ಸೂಚ್ಯಂಕದ ಕಳೆದ 2015 ನ್ನೂ ಸೇರಿದಂತೆ ಐದು ವರ್ಷಗಳ ವರದಿಗಳಲ್ಲಿ ಕ್ರಮವಾಗಿ ಭಾರತವು 93, 97, 100, 103 ಮತ್ತು ಈಗ 102 ನೇ ಸ್ಥಾನಗಳನ್ನು ಗಳಿಸಿರುವುದನ್ನು ಗಮನಿಸಿದರೆ ದೇಶದ ಸ್ಥಿತಿ ಅಷ್ಟೇನೂ ಉತ್ತಮಗೊಂಡಿಲ್ಲ ಎನಿಸುತ್ತದೆ. 

ಪರಕೀಯರ ಆಡಳಿತದಿಂದ ಮುಕ್ತಗೊಂಡ ಈ ಎಪ್ಪತ್ತೆರಡು ವರ್ಷಗಳಲ್ಲಿ ಜನಸಂಖ್ಯೆಯು ಶರವೇಗದಲ್ಲಿ ಏರಿಕೆಯಾಗಿ ಸಧ್ಯ ಒಂದು ನೂರ ಮೂವತ್ತು ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಭಾರತದಂತಹ ಬೃಹತ್ ದೇಶವನ್ನು ಹಸಿವಿನಿಂದ ಮುಕ್ತಗೊಳಿಸುವುದು ಸರ್ವ ಸಾಧಾರಣವಾದ ವಿಷಯವಲ್ಲ ಎಂಬ ಮಾತುಗಳ‌ ನಡುವೆಯೂ ಅದನ್ನು ಸಾಧಿಸಬಹುದಾಗಿತ್ತು ಎನ್ನುವುದು ಮಾತ್ರ ಸುಳ್ಳಲ್ಲ. ಕಳೆದೆರಡು ದಶಕಗಳಲ್ಲಿ ಏರಿಕೆಯಾಗುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ 4.5 ಪಟ್ಟು ಏರಿಕೆಯಾಗಿರುವ ಜಿ.ಡಿ.ಪಿ ಮತ್ತು 3 ಪಟ್ಟು ಏರಿಕೆ ಕಂಡಿರುವ ತಲಾ ಬಳಕೆಯು ಕೂಡ‌ ಆಹಾರ ಉತ್ಪಾದನೆಯ ವಿಷಯದಲ್ಲಿ ಸವಾಲೊಡ್ಡಿದೆ. ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಎರಡು ಪಟ್ಟು ಪ್ರಗತಿ ಕಂಡಿದ್ದರೂ ಅಸಹಜ ಎನ್ನುವ ರೀತಿಯಲ್ಲಿ ಇರುವ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಭಾರತದ ಹಸಿವಿನ ಸ್ಥಿತಿಗತಿಯನ್ನು ಸ್ಥೂಲವಾಗಿ ಗಮನಿಸಿದರೆ ಗಾಬರಿ ಹುಟ್ಟಿಸುವ ಅನೇಕ‌ ವಿಷಯಗಳು ಬೆಳಕಿಗೆ ಬರುತ್ತವೆ. ಆಹಾರ ಮತ್ತು ಕೃಷಿ ಸಂಸ್ಥೆ (FAO) ಯ ಅಂದಾಜಿನ ಪ್ರಕಾರ ಜಾಗತಿಕ ಆಹಾರ ಭದ್ರತೆ ಮತ್ತು ಪೌಷ್ಟಿಕತೆ ವರದಿಯಲ್ಲಿ ತಿಳಿಸಿರುವಂತೆ ಭಾರತದಲ್ಲಿ 194.4 ದಶಲಕ್ಷ ಮಂದಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದರ ಆಧಾರದ ಮೇಲೆಯೆ ನೋಡುವುದಾದರೆ ದೇಶದ ಒಟ್ಟು ಜನಸಂಖ್ಯೆಯ ಶೇ 14.5 ರಷ್ಟು ಮಂದಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ವರದಿಯಲ್ಲಿ ಅಡಕವಾಗಿರುವ  ಮತ್ತೊಂದು ಆತಂಕಕಾರಿ ಅಂಶವೆಂದರೆ ಗರ್ಭ ಧರಿಸುವ  15 ರಿಂದ 49 ವಯೋಮಾನದ ಶೇ 51.4 ಮಹಿಳೆಯರು ಮತ್ತು ಐದು ವರ್ಷದ ಒಳಗಿನ ಶೇ 37.9 ಮಕ್ಕಳು ಕೂಡ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 

ಈ ಜಾಗತಿಕ‌ ಹಸಿವು‌ ಸೂಚ್ಯಂಕ-2019 ರ ವರದಿ ನೀಡಿರುವ ಎಚ್ಚರಿಕೆಯ ಹಿನ್ನೆಲೆಯಲ್ಲಿ ದೇಶದಲ್ಲಿನ ಆಹಾರ ಉತ್ಪಾದನೆ, ಅದರ ಶೇಖರಣೆ, ನಿರ್ವಹಣೆ ಮತ್ತು  ವಿತರಣೆಗಳ ಕಡೆ ಗಮನ ಹರಿಸಬೇಕಾದ ತುರ್ತನ್ನು ಮನಗಾಣಬೇಕಿದೆ. ಕಾರ್ಪೊರೇಟ್ ಸಂಸ್ಕೃತಿಯ ಕಡೆ ವಾಲುತ್ತಿರುವ ದೇಶವು ಕೃಷಿಯ ವಿಷಯದಲ್ಲಿ ಅನೇಕ‌ ಸವಾಲುಗಳ ಎದುರಿಸುತ್ತಿದೆ. ನಗರೀಕರಣದಿಂದ ಕೃಷಿ ಭೂಮಿಯ ಕೊರತೆ, ಮಳೆಯ‌ ಅಭಾವದಿಂದ ಉಂಟಾಗುತ್ತಿರುವ ನೀರಿನ ಸಮಸ್ಯೆ, ಕೃಷಿಯೆಡೆಗೆ ಯುವಜನರ‌ ನಿರಾಸಕ್ತಿ, ಅಸಮರ್ಪಕ ಬೆಲೆ ನಿಗಧಿಯೂ ಸೇರಿದಂತೆ ಮುಂತಾದ ಸಮಸ್ಯೆಗಳು ಆಹಾರ ಧಾನ್ಯ, ತರಕಾರಿಗಳು, ಹಣ್ಣುಗಳ ಉತ್ಪಾದನೆಯಲ್ಲಿ ಪ್ರಗತಿ ಕಾಣಲಾಗುತ್ತಿಲ್ಲ. ಇದೆಲ್ಲಾ ಸವಾಲುಗಳ‌ ನಡುವೆ‌ ಕೃಷಿಯಲ್ಲಿ  ಉತ್ತಮ ಪ್ರಗತಿ ತೋರಿದರೂ ಆಹಾರ ಧಾನ್ಯಗಳ ಅಸಮರ್ಪಕ ಶೇಖರಣೆ ಮತ್ತು ಸರಿಯಾದ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅನುಷ್ಠಾನ ಇಲ್ಲದಿರುವಿಕೆಯಿಂದ ದೇಶದ ಮಕ್ಕಳು, ಮಹಿಳೆಯರು ಮತ್ತು ಇತರ ನಾಗರೀಕರಿಗೆ ಅಗತ್ಯ ಆಹಾರ ಪೂರೈಸಲು ಸಾಧ್ಯವಾಗುತ್ತಿಲ್ಲ. ಇದರ ಜೊತೆಗೆ ಆಹಾರ ಧಾನ್ಯಗಳ ಕೃಷಿ ಮತ್ತು ಶೇಖರಣೆಯ ಸಂದರ್ಭದಲ್ಲಿನ ಅತಿಯಾದ ರಾಸಾಯನಿಕಗಳ ಬಳಕೆಯಿಂದ ಕೂಡ ಗುಣಮಟ್ಟದ ಆಹಾರ ನೀಡಲು ಸಾಧ್ಯವಾಗುತ್ತಿಲ್ಲ

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಆರ್ಥಿಕ ಲಾಭದ ಕಾರಣಕ್ಕಾಗಿ ಅನುತ್ಪಾದಕ ವಲಯಗಳೆಂದು ಗುರುತಿಸುವ ನಮ್ಮ ಸರಕಾರಗಳು ಅವುಗಳೆ ದೇಶದ ಒಟ್ಟಾರೆ ಅಭಿವೃದ್ಧಿಗೆ ದಾರಿದೀಪ ಎನ್ನುವುದನ್ನು ಅರಿಯಬೇಕಿದೆ. ದೇಶದ ಎಲ್ಲರೂ ಉತ್ತಮ ಆರೋಗ್ಯ ಮತ್ತು ಶಿಕ್ಷಣ ಹೊಂದಬೇಕಾದರೆ ಪೌಷ್ಟಿಕ ಆಹಾರ ಬಹಳ ಮುಖ್ಯ. 
ಕೇಂದ್ರ ಸರ್ಕಾರ ಮತ್ತು‌ ಎಲ್ಲಾ ರಾಜ್ಯಗಳ ಸರ್ಕಾರಗಳು ದೇಶದ ಪ್ರತಿ ನಾಗರೀಕರಿಗೂ ಸಮರ್ಪಕವಾಗಿ ಆಹಾರ  ಪೂರೈಸಲು ಹತ್ತು ಹಲವು ಯೋಜನೆಗಳು ಜಾರಿಗೆ ತಂದೀದ್ದರೂ ಅವುಗಳ ಪರಿಣಾಮಕಾರಿ ಅನುಷ್ಠಾನವಾಗದೆ ಅಭಿವೃದ್ಧಿ ಮರೀಚಿಕೆಯಾಗಿಯೆ ಉಳಿದಿದೆ. ರಾಷ್ಟ್ರೀಯ ಆಹಾರ ಭದ್ರತೆ ಮಿಷನ್, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಫಸಲ್ ಭಿಮಾ ಯೋಜನೆ, ಇ-ಮಾರ್ಮೆಟ್ ಪ್ಲೇಸ್, ಮಧ್ಯಾಹ್ನದ ಬಿಸಿ ಊಟ ಯೋಜನೆಯಂತಹ ಅನೇಕ  ಯೋಜನೆಗಳಲ್ಲಿ ಕಾಳದಂಧೆಕೋರತನ‌ ಮತ್ತು ಭ್ರಷ್ಟಾಚಾರದಂತಹ ಹಲವಾರು ಅಂಶಗಳು ಮತ್ತು ವಿತರಣಾ ವ್ಯವಸ್ಥೆಯಲ್ಲಿನ ನ್ಯೂನತೆಗಳು ಮೇಳೈಸಿರುವುದರಿಂದ ಫಲಾನುಭವಿಗಳಿಗೆ‌ ಅದು ಅಗತ್ಯಕ್ಕನುಗುಣವಾಗಿ ತಲುಪುತ್ತಿಲ್ಲ. 

ಜನರ ಆರೋಗ್ಯ ಮತ್ತು ಅವರ ಸಂತೋಷದ‌ ಸೂಚ್ಯಂಕಗಳು ದೇಶದ ಅಭಿವೃದ್ಧಿ ಸೂಚ್ಯಂಕದಲ್ಲಿ ಮಾನದಂಡವಾದರೆ ಅವುಗಳಿಗೆ ಮಾನ್ಯತೆ ದೊರಕುತ್ತದೆ. ಈ ವಿಚಾರವು ರಾಷ್ಟ್ರೀಯ ಆದ್ಯತೆಯಾಗಿ ರೂಪುಗೊಂಡು ವಿಶ್ವವಿದ್ಯಾನಿಲಯಗಳು ಮತ್ತು ರಾಷ್ಟ್ರೀಯ ಆಹಾರ ಸಂಸ್ಥೆಗಳು ಹಾಗೂ ಆಹಾರ ವಿಜ್ಞಾನ ವಿಭಾಗಳಲ್ಲಿ ಸೂಕ್ತ ಸಂಶೋಧನೆಗಳು ನಡೆದು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಅದಷ್ಟೆ ಅಲ್ಲದೆ  ಸರ್ಕಾರಗಳು ಸಮಸ್ಯೆಯಿಂದ ಉಂಟಾಗುತ್ತಿರುವ ನ್ಯೂನತೆಗಳನ್ನು ಅರಿತು ದೇಶದಲ್ಲಿ ಆಹಾರ ಭದ್ರತೆ ಮತ್ತು ಸಂಬಂಧಿಸಿದ ಯೋಜನೆಗಳನ್ನು ಖಾತ್ರಿಪಡಿಸಿ ಮತ್ತಷ್ಟು ಬಲಪಡಿಸಬೇಕಿದೆ. ಇದರ‌ ಜೊತೆಗೆ ಈ ಸಮಸ್ಯೆಯ ನಿವಾರಣೆಗೆ ಅಗತ್ಯ ಪರಿಹಾರಾತ್ಮಕ ಕ್ರಮಗಳನ್ನು‌ ವಹಿಸಿದ್ದಲ್ಲಿ ಮಾತ್ರ ದೇಶ ಅಪೌಷ್ಟಿಕತೆಯಂತಹ ಸಮಸ್ಯೆಗಳಿಂದ ಹೊರ ಬಂದು‌ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಸಾಧನೆ ಮಾಡಲು ಸಾಧ್ಯ. 

-ಪ್ರಸನ್ನಕುಮಾರ್ ಕೆರಗೋಡು





Saturday, 28 September 2019

ಜನಪದ‌ ಸಂಸ್ಕೃತಿಯ ಬಿಂಬ ಮಂಟೇಸ್ವಾಮಿಯ ಕಥಾಪ್ರಸಂಗ


ದಿನಾಂಕ: 28.09.2019 ರಂದು ವಿಜಯಕರ್ನಾಟಕದ ಲವಲವಿಕೆಯಲ್ಲಿ ಪ್ರಕಟವಾದ ಅನ್‌ಎಡಿಟೆಡ್ ರಂಗ ವಿಮರ್ಶೆ

ಜನಪದ‌ ಸಂಸ್ಕೃತಿಯ ಬಿಂಬ ಮಂಟೇಸ್ವಾಮಿಯ ಕಥಾಪ್ರಸಂಗ

ತಮ್ಮ ಪರಂಪರೆ ಬಿಂಬಿಸುವ ದಿರಿಸನ್ನು ಧರಿಸಿ "ಶರಣು ಶರಣುಮತಿ‌ ಗಣನಾಯ್ಕಾ...ವಿದ್ಯಾ ಬುದ್ದೀಯ ಕೊಡೊ‌ ಗಣನಾಯ್ಕಾ.. " ಎಂದು ಪದವ ಹಾಡುತ್ತಾ ಐದು ಜನ‌ ನೀಲಗಾರರು ರಂಗ ಪ್ರವೇಶ ಪಡೆಯುವುದರೊಂದಿಗೆ ಪ್ರವೇಶಿಕೆ ಕಂಡುಕೊಂಡ "ಮಂಟೇ ಸ್ವಾಮಿ ಕಥಾ ಪ್ರಸಂಗ" ನಾಟಕ ಮುಂದಿನ‌ ಎರಡೂವರೆ ಗಂಟೆಗಳ ಕಾಲ ಮೈಸೂರಿನ ಕಿರುರಂಗಮಂದಿರದಲ್ಲಿ ಕಿಕ್ಕಿರಿದಿದ್ದ ಪ್ರೇಕ್ಷಕರನ್ನು ಹಿಡಿದಿಟ್ಟ ಪರಿ ನಿಜಕ್ಕೂ ಅಚ್ಚರಿ. ಗಳಿಗೆ ಗಳಿಗೆಗೂ ನೆರೆದಿದ್ದವರಲ್ಲಿ ಕುತೂಹಲ ಮೂಡಿಸುತ್ತಾ ಸಾಗಿದ ರಂಗದ ಮೇಲಿನ ಆಟ ಪರಂಜ್ಯೋತಿ, ಜ್ಯೋತಿರ್ಲಿಂಗಯ್ಯ ಎಂದೆಲ್ಲಾ  ತನ್ನ ಸಿಸುಮಕ್ಕಳಿಂದ ಕರೆಸಿಕೊಳ್ಳುವ ಮಂಟೇಸ್ವಾಮಿಯು ಡಾಂಭಿಕರ  ಭಕ್ತಿಯನ್ನು ಬಯಲು ಮಾಡುತ್ತಾ, ಸಮಾಜದ ಓರೆಕೋರೆಗಳನ್ನು ತೀಕ್ಷ್ಣ ಮಾತುಗಳಿಂದ ಅಣಕಿಸಿ ತಿದ್ದುತ್ತಾ  ತನ್ನ ಪವಾಡಗಳ ಮೂಲಕ ಶಿಷ್ಯಕೋಟಿಯನ್ನು ಸಂಪಾದಿಸಿ ಉತ್ತರದ ಕಲ್ಯಾಣದಿಂದ ದಕ್ಷಿಣದ ಹಲಗೂರಿನ ಕಡೆಗೆ ಬರುವ ದಾರಿಯೆ ನಾಟಕದ ವಸ್ತುವಾಗಿದೆ. ಒಂದಾದ ಮೇಲೊಂದರಂತೆ ದೃಶ್ಯಗಳನ್ನು ಜೊಡಿಸಿಟ್ಟಂತೆ‌ ಚಲನೆ ಕಂಡುಕೊಳ್ಳುವ ಹಿರಿಯ ಸಾಹಿತಿ ಹೆಚ್.ಎಸ್.ಶಿವಪ್ರಕಾಶರ ನಾಟಕ ಹಿರಿಯ ರಂಗ ನಿರ್ದೇಶಕ  ಮೈಮ್ ರಮೇಶರ ಸಮರ್ಥ ನಿರ್ದೇಶನದಲ್ಲಿ ಜಿಪಿಐಇಆರ್ ತಂಡದ ಮೂಲಕ ಅರ್ಥಪೂರ್ಣವಾಗಿ ಮೂಡಿ ಬಂದಿದೆ. 


ಮೂವತ್ತೈದಕ್ಕೂ ಹೆಚ್ಚಿನ‌ ಸಂಖ್ಯೆಯ ನಟ-ನಟಿಯರ ದೊಡ್ಡ ದಂಡು ರಂಗಮಂಚದ ಮೇಲೆ ಲವಲವಿಕೆಯಿಂದ ವಿವಿಧ ಪಾತ್ರಗಳನ್ನು ಧರಿಸಿ ಅವುಗಳ ಭಾವ ಭಂಗಿಗಳನ್ನು ಪ್ರದರ್ಶಿಸುತ್ತಾ ನಟಿಸುವ ಮೂಲಕ ಮಂಟೇಸ್ವಾಮಿಯ ಕಾಲಘಟ್ಟದ ಜನಪದ ಸಂಸ್ಕ್ರತಿಯ ಬಿಂಬವನ್ನು ಅನಾವರಣಗೊಳಿಸಿದೆ. ಅದು ಒಂದು ಪಾತ್ರವಾಗಿಯಾಗಲಿ ಅಥವಾ ಸಮಗ್ರವಾದ ಒಂದು‌ ಗುಂಪಾಗಿಯೆ ಆಗಲಿ ತಮ್ಮ ಭಾಷೆ, ಮಾತಿನ ವೈಖರಿ, ಭಾವಾಭಿನಯ, ಆಂಗಿಕ ಅಭಿನಯ ಮತ್ತು ವಸ್ತ್ರ ವಿನ್ಯಾಸದಂತಹ ಎಲ್ಲಾ ಆಯಾಮಗಳಲ್ಲೂ ರಂಗಾಸಕ್ತರನ್ನು ಸೆಳೆಯುವ ನಾಟಕ ಉತ್ತರ ಭಾಗ ಮತ್ತು ದಕ್ಷಿಣದ ಮಳವಳ್ಳಿ-ಕೊಳ್ಳೆಗಾಲ ಭಾಗದ ಜನಪದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಆ ಕಾಲದ ಜನ‌ರ ಬದುಕು, ಅವರ ಆದ್ಯತೆಗಳು, ಭಾಷೆಗಳನ್ನು ತಮ್ಮ ಹಾವ-ಭಾವ ಮತ್ತು‌ ನಟನೆಯ ಮೂಲಕ ರಂಗದ ಮೇಲೆ ವ್ಯಕ್ತಪಡಿಸುವಲ್ಲಿ ಎಲ್ಲಾ ನಟನಟಿಯರು ಯಶಸ್ವಿಯಾಗಿದ್ದಾರೆ. ತನ್ನ ಪ್ರವೇಶಿಕೆಯಲ್ಲಿ ಭತ್ತದ ಹುಲ್ಲು ತುಂಬಿರುವ ತಿಪ್ಪೆಯಿಂದ ವಿವಿಧ ಮ್ಯಾನರಿಸಂನೊಡನೆ ದಿಗ್ಗನೆ ಎದ್ದು ಬಂದು ತನ್ನದೆ ಭಾಷಾ ಶೈಲಿಯಲ್ಲಿ ಡಾಂಭಿಕ‌ ಭಕ್ತಿಯ ಟೀಕೆ ಮತ್ತು ಕಾಲಜ್ಞಾನ ನುಡಿಯುತ್ತಾ ಸಂಭಾಷಣೆಯಲ್ಲಿ ತೊಡಗುವ ಮಂಟೇಸ್ವಾಮಿಯ ಪಾತ್ರ ಬಹುತೇಕ ಎಲ್ಲಾ ದೃಶ್ಯಗಳಗಲ್ಲೂ  ಆವರಿಸಿಕೊಂಡಿರುವುದರಿಂದ ಸಹಜವಾಗಿ ಅದಕ್ಕೆ‌ ಹೆಚ್ಚು ವ್ಯಾಪ್ತಿ ಸಿಕ್ಕಂತಾಗಿದೆ. ಆ ಪಾತ್ರ ನಿರ್ವಹಿಸಿರುವ ನವೀನ್ ನೇತಾಜಿ ಅಮೋಘವಾಗಿ‌ ನಟಿಸಿದ್ದಾರೆ. ಸ್ತ್ರೀ ಪಾತ್ರಗಳಿಗೆ ಆದ್ಯತೆ ಕಡಿಮೆಯಿದ್ದರೂ ನಾಟಕದ ಒಟ್ಟಾರೆ ಚೌಕಟ್ಟಿನಲ್ಲಿ ಪ್ರಮುಖ ಎನಿಸುವ ಪ್ರಾಮುಖ್ಯತೆ ಅವರಿಗೆ ಸಿಕ್ಕಿದೆ. 

ಮಂಟೇಸ್ವಾಮಿ ಕಥಾಪ್ರಸಂಗ ಪರಿಪೂರ್ಣವಾಗಿ ಸಂಗೀತ ರೂಪಕ ಎನಿಸುವ ಮಟ್ಟಿಗೆ ನಾಟಕದಲ್ಲಿ ಅದು ಪ್ರಮುಖ ಪಾತ್ರ ವಹಿಸುತ್ತದೆ. ರಂಗದ ಮೇಲೆ ನೀಲಗಾರರು ಪ್ರವೇಶ ಪಡೆದುಕೊಂಡಾಗೆಲ್ಲಾ ಹಾಡುತ್ತಾ ಕುಣಿಯುತ್ತಲೆ ಇಡಿ ಕಥೆಯು ಮುನ್ನೆಡೆಯಲು ಅನುವು ಮಾಡಿಕೊಡುತ್ತಾರೆ. ದೇವಾನಂದ ವರಪ್ರಸಾದ್ ನಿರ್ದೇಶಿಸಿರುವ ಸಂಗೀತ ಮಂಟೇಸ್ವಾಮಿ-ಸಿದ್ದಪ್ಪಾಜಿಯ ಕಥಾನಕಗಳನ್ನು ಬಿಚ್ಚಿಡುವ ಸಾಂಪ್ರದಾಯಿಕ ರಾಗ-ಲಯಗಳನ್ನು ಒಳಗೊಂಡು  ನಾಟಕದ ಚಲನೆ ಮತ್ತು ಪರಿಣಾಮ ಎರಡಕ್ಕೂ ಕಾರಣಕರ್ತವಾಗುವುದಲ್ಲದೆ ನೆರೆದಿದ್ದ ಪ್ರೇಕ್ಷಕರು ಜೊತೆಯಲ್ಲಿ ತಾವೂ ಗುನುಗುವಂತೆ‌ ಮಾಡಿದ್ದು ಅದರ ಯಶಸ್ಸಿಗೆ ಹಿಡಿದ ಕನ್ನಡಿಯಾಗಿದೆ. ನಾಟಕದ‌‌ ಓಘಕ್ಕೆ ಕೊಡುಗೆ ನೀಡಿರುವ ಶರತ್.ವಿ ಯವರ ರಂಗ ಸಜ್ಜಿಕೆ  ಮತ್ತು ದಿವ್ಯ.ಎನ್ ರವರ ವಸ್ತ್ರ ವಿನ್ಯಾಸದ ದೃಷ್ಟಿಯಿಂದ ನೋಡುವುದಾದರೆ ನಾಟಕ ಸಮಗ್ರವಾಗಿ ಸ್ವಲ್ಪ ಶ್ರೀಮಂತವೆ ಅನ್ನಬಹುದಾಗಿದೆ. ಪ್ರತಿ ಪಾತ್ರಧಾರಿಗಳಿಗೂ ಆಯಾ ಪಾತ್ರಗಳಿಗೆ ಒಪ್ಪುವ ಹಾಗೆ ಅಚ್ಚುಕಟ್ಟಾಗಿ ವಸ್ತ್ರ ವಿನ್ಯಾಸಿಸಿರುವುದು ನಾಟಕದ ಯಶಸ್ಸಿಗೆ ಕಾರಣವಾಗಿದೆ. ಅದರಲ್ಲೂ ಮಂಟೇಸ್ವಾಮಿ, ಬಸವಣ್ಣ, ಸಿದ್ದಪ್ಪಾಜಿ, ಕಲಿಪುರುಷ ಹಾಗೂ ಸ್ತ್ರೀ ಪಾತ್ರಗಳ ವೇಷಭೂಷಣಗಳು ನೋಡಲು ಪರಿಣಾಮಕಾರಿಯಾಗಿವೆ. ರಾಘವೇಂದ್ರ ಅಚ್ಚಪ್ಪ ನಿರ್ವಹಿಸಿರುವ ಬೆಳಕು ಕರಾರುವಕ್ಕು ಮತ್ತು ಆಪ್ಯಾಯಮಾನವಾಗಿದ್ದು ಪಾತ್ರಗಳು ಮತ್ತು ದೃಶ್ಯಗಳ ಭಾವವನ್ನು ಪ್ರತಿಬಿಂಬಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 


ನಾಟಕದ‌ ಶೀರ್ಷಿಕೆ ಹೇಳಿ ಕೇಳಿ ಮಂಟೇಸ್ವಾಮಿಯ ಕಥಾ ಪ್ರಸಂಗವೇ ಆಗಿರುವುದರಿಂದ ಇದೊಂದು‌ ಕಥಾನಕವಾಗಿಯೆ ಇದ್ದು ನೀಲಗಾರರ ಪದಗಳ ಮೂಲಕ ವ್ಯಕ್ತವಾಗುತ್ತಾ ಹೋಗುತ್ತದೆ. ಕಲ್ಯಾಣದಲ್ಲಿ ಬಿಚ್ಚಿಕೊಳ್ಳುವ ಕಥೆ ಮಂಟೇಸ್ವಾಮಿಯ ಬರುವಿಕೆಗಾಗಿ ನಿಂದಕರು ಮತ್ತು ಟೀಕಾಕಾರರ ಉಪಟಳ ಇದ್ದಾಗಿಯೂ ಬಸವಣ್ಣ ಮತ್ತು ಪತ್ನಿ ನೀಲಾಂಭಿಕೆಯರು ಕಾಯುವ ಮತ್ತು ನಂತರ ಅವನನ್ನು ಉಪಚರಿಸುವ ರೀತಿ ಆ ಕಾಲದ ಗುರು ಪರಂಪರೆಗೆ ನೀಡಬಹುದಾದ ಸಾಕ್ಷಿಯಾಗಿದೆ. ಶರಣರಿಗೆ ಕೇಡುಗಾಲ ಬರುತ್ತದೆ ಮತ್ತು ಕಲ್ಯಾಣ ಅವಸಾನವಾಗುತ್ತದೆ ಎನ್ನುವ ಕಾಲಜ್ಞಾನದ ನುಡಿಗಳನ್ನಾಡುತ್ತಲೆ ರಾಚ್ಚಪ್ಪಾಜಿಯನ್ನು ತನ್ನ ಸಿಸುಮಗನಾಗಿ ಪಡೆದು ಅವನೊಂದಿಗೆ ವಿಜಯ‌ನಗರಕ್ಕೆ ಬರುವ ಮಂಟೇಸ್ವಾಮಿ ಶ್ರೀಮಂತಿಕೆ‌ಯ ನಡುವೆಯೂ ಅಲ್ಲಿನ‌ ಜನಗಳ ವ್ಯಾಪಾರಿ ಮನೋಭಾವನೆ ಮತ್ತು ಮನೋದಾರಿದ್ರ್ಯವನ್ನು ಬಯಲಿಗೆಳೆಯುತ್ತಾನೆ. ದಕ್ಷಿಣದ ಕಡೆ ತನ್ನ ಪ್ರಯಾಣ ಬೆಳೆಸುತ್ತಾ ಮಳವಳ್ಳಿಯ ಕುಂದುರು ಬೆಟ್ಟದಲ್ಲಿ‌ ನೆಲೆನಿಂತು ರಾಚಪ್ಪಾಜಿ-ದೊಡ್ಡಮ್ಮಳಿಗೆ ಮದುವೆ ಮಾಡಿ ಸಿದ್ದಾಪ್ಪಾಜಿಯ ಶಿಷ್ಯತ್ವವನ್ನು‌ ಒಪ್ಪಿ ಅವನ ಮೂಲಕ ಪವಾಡಗಳನ್ನು ಮಾಡುತ್ತಾ ಅಸಂಖ್ಯ ಜನರ ಕಣ್ಮಣಿಯಾಗುತ್ತಾನೆ. ಕಲ್ಯಾಣದ ಶರಣ ಪರಂಪರೆಯ ಕಾಲಘಟ್ಟದಲ್ಲಿ ಪ್ರಾರಂಭವಾಗಿ ವಿಜಯನಗರ ಕಾಲವನ್ನು ದಾಟಿ ಇಲ್ಲಿ ಮಲೈ ಮಹದೇಶ್ವರನ ಸಮಕಾಲೀನನಾಗಿ ಮೆರೆಯುವ ಮಂಟೇಸ್ವಾಮಿ ಓರ್ವ ವ್ಯಕ್ತಿ ಎನ್ನುವುದಕ್ಕಿಂತ ಒಂದು ಪರಂಪರೆ ಎನ್ನಬಹುದೇನೊ. ಹಲಗೂರಿನ ಐದು ಜನ ಪಾಂಚಾಳರು ಐದು ದೇವಿಯರು ಮತ್ತು ತ್ರಿಮೂರ್ತಿಗಳನ್ನು ಸೆರೆಯಾಗಿಸಿ ಮೆರೆಯುವ ಅಟ್ಟಹಾಸ ಮನುಷ್ಯನ‌ ದುರಹಂಕಾರದ ಪ್ರತೀಕವಾಗಿ ಗೋಚರವಾಗುತ್ತದೆ. ಜನರ ಮನಸ್ಸಿನಲ್ಲಿ ನಿಂತು ಆಟವಾಡಿಸುವ ಕಲಿಪುರುಷನ ಉಪಟಳ ನಿಗ್ರಹಿಸಿ ಅವನನ್ನೂ ಬಂಧಿಸಿ, ಕಲಿಗಾಲ ಹತ್ತಿರವಾಗುತ್ತಿದೆ, ಆ‌ಮೂಲಕ ಜನರು ಭ್ರಷ್ಟರಾಗುವ ಮುನ್ನ ತಾನು ಪಾತಾಳ ಸೇರಬೇಕು ಎನ್ನುವ ಮಂಟೇಸ್ವಾಮಿಯು ಕಬ್ಬಿಣಕ್ಕಾಗಿ ಸಿದ್ದಪ್ಪಾಜಿಯನ್ನು ಕಳಿಸುವಲ್ಲಿ ಅವರನ್ನು ದಮನ ಮಾಡುವ ಯೋಜನೆ ರೂಪಿಸುತ್ತಾನೆ. ಇಲ್ಲಿ ಬರುವ ಮಂಟೇಸ್ವಾಮಿ ಮತ್ತು ಸಿದ್ದಪ್ಪಾಜಿಯವರ ಪವಾಡಗಳು ಮನುಷ್ಯನ ಅಹಂಕಾರವನ್ನು ನಿಗ್ರಹಿಸುವ ತಂತ್ರಗಳಾಗಿವೆ. ಇಡಿ ನಾಟಕದ ಕಥೆ ಮಾನವನ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಮೂಡಿಬಂದಿರುವಂಥದ್ದು ಎಂದು ವ್ಯಾಖ್ಯಾನಿಸಬಹುದು. ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ‌ ಭಾಗದಲ್ಲಿ ಜನಜನಿತವಾಗಿರುವ ಮಂಟೇಸ್ವಾಮಿ ಕಥೆಯ ಈ ನಾಟಕವನ್ನು ಕಿರುರಂಗಮಂದಿರದಲ್ಲಿ ಎಲ್ಲೆಲ್ಲಿ ಜಾಗ ಸಿಗುತ್ತದೊ ಅಲ್ಲೆಲ್ಲಾ ಕುಂತು-ನಿಂತು ವೀಕ್ಷಿಸಿ ಆನಂದಿಸಿದ ಜನ ಇನ್ನೂ ಜನಪದ ಸಂಸ್ಕೃತಿಯ ಹಿನ್ನೆಲೆಯ ಇಂತಹ ಪ್ರಯೋಗಗಳಿಗೆ ಒತ್ತು ಕೊಡುವುದನ್ನು ನೋಡಿದರೆ ಜನಪದದ ಗಟ್ಟಿತನ‌ ಅರ್ಥವಾಗುತ್ತದೆ. 

-ಪ್ರಸನ್ನಕುಮಾರ್ ಕೆರಗೋಡು





Tuesday, 11 June 2019

ಯುವಕನ ನಗ್ನ ಮೆರವಣಿಗೆ: ಪೈಶಾಚಿಕ ಕೃತ್ಯದ ನಿರ್ಲಕ್ಷ್ಯ ಬೇಡ

*ಪೈಶಾಚಿಕ ಕೃತ್ಯದ ನಿರ್ಲಕ್ಷ್ಯ ಬೇಡ*

ಅದೇನು ತಪ್ಪು ಮಾಡಿದ್ದನು ಆ ನತದೃಷ್ಟ. ಗುಂಡ್ಲುಪೇಟೆ ತಾಲ್ಲೂಕಿನ ಹಳ್ಳಿಯ ನಡು ರಸ್ತೆಯಲ್ಲಿ ನಗ್ನವಾಗಿ ಅವನ ಮೆರವಣಿಗೆ ನಡೆಯಿತಲ್ಲ. ಆದರೂ ಮುಚ್ಚಿಯೆ ಹೋಗಲಿದ್ದ ಈ ಪೈಶಾಚಿಕ ಘಟನೆ ಪಾಪ ಯಾರೋ ಅದೆ ಪಿಶಾಚಿಗಳ ಗುಂಪಿನವರೆ ಅದನ್ನು ಚಿತ್ರೀಕರಿಸಿ ಪ್ರತಾಪನ ಮೇಲಿನ ತಮ್ಮ ಈ ಪ್ರಲಾಪದ ಆರ್ಭಟ ಮಾಡಲು ಹೋಗಿ ತಗಲಾಕಿಕೊಂಡಿದ್ದಾರೆ. 

ನಾಗರೀಕ ಸಮಾಜಕ್ಕೆ ಜೀವವಿದ್ದರೆ ಇಷ್ಟೊತ್ತಿಗಾಗಲೆ ಎಲ್ಲೆಡೆ ಖಂಡನೆಯ ಕೂಗು ಏಳಬೇಕಿತ್ತು. ಅದಾಗಿಲ್ಲ. ನತದೃಷ್ಟ ಪ್ರತಾಪ ಖಿನ್ನತೆಗೊಳಗಾಗಿ ನಿಶ್ಯಬ್ದನಾಗಿದ್ದಾನೆ. ಭಯಭೀತರಾಗಿರುವ ಮನೆಯವರು ದೂರು ನೀಡಿಲ್ಲ. ಅನಾಗರೀಕ ಕೃತ್ಯವೊಂದರ ಮಾಹಿತಿ ತಿಳಿದ‌ಕೂಡಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬೇಕಿದ್ದ ಆರಕ್ಷಕರು ಅದಾವ ಕಾರಣಕ್ಕೊ ಮೌನವಾಗಿದ್ದಾರೆ. ಸಣ್ಣಪುಟ್ಟದಕ್ಕೂ ಬಂಡಾಯವನ್ನು ಆರ್ಭಟಿಸುವ ಜಿಲ್ಲೆಯ ಪ್ರಜ್ಞಾವಂತರು ತೆಪ್ಪಗಾಗಿದ್ದಾರೆ. *ದನಿಯೆತ್ತಬೇಕಾದ ಯುವ ಸಮೂಹ ಮೊಬೈಲ್ನಲ್ಲಿ ಟೀವಿ ಗಳಲ್ಲಿ ವರ್ಲ್ಡ್‌ ಕಪ್ ಕ್ರಿಕೆಟ್ ಆಸ್ವಾದಿಸುತ್ತಿದೆ.*

ಕೊನೆಗೂ ಮತ್ತೆ ಅನ್ನಿಸುವುದು ಆತ ಮಾಡಿದ ತಪ್ಪಾದರೂ ಏನು ಎಂದು. ಅದ್ಯಾರೊ ಹೇಳುತ್ತಾರೆ. ದೇವರ ವಿಗ್ರಹವನ್ನು ಹಾಳು ಮಾಡಿದ್ದನು ಎಂದು. ಆದರೆ ಅದಕ್ಕೆ ಪ್ರತ್ಯಕ ಸಾಕ್ಷ್ಯವಿಲ್ಲ. ಹಾಗೇಯೆ ಅಂದುಕೊಂಡರೂ ಅದನ್ನು ನಿಭಾಯಿಸಲಿಕ್ಕೆ ಕಾನೂನಿತ್ತು. ಆತ ಅಸಹಾಯಕ ಎಂದು‌ ನಡೆಯಿತೊ, ಆತ ದಲಿತ ಎಂಬ ಕಾರಣಕ್ಕಾಗಿ ನಡೆಯಿತೊ, ಹಳೆಯ ದ್ವೇಷದ ಕಾರಣಕ್ಕಾಗಿ ನಡೆಯಿತೋ, ಮುಂದೆ ಐ.ಎ.ಎಸ್ ಅಧಿಕಾರಿಯಾಗುತ್ತಾನೆ ಎನ್ನುವ ಕಿಚ್ಚಿನಿಂದ‌ ನಡೆಯಿತೊ. ಒಟ್ಟಾರೆ‌ ನಡೆದಾಗಿದೆ.

ಅಂಥಾ ದುರ್ಬರ ಘಟನೆಯೊಂದರ ರೂವಾರಿಗಳು ಮಾತ್ರ ರಾಜರೋಷವಾಗಿ ವಾರದಿಂದಲೂ ಓಡಾಡಿಕೊಂಡಿದ್ದಾರೆ. ಜಾಗೃತ ಮನಸ್ಸುಗಳು ಮಾತ್ರ ಅಲ್ಲಿ ಇಲ್ಲಿ ಪ್ರತಿಭಟನೆ, ಬರವಣಿಗೆ ಅದೂ ಇದೂ ಅಂತ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಆಗಲೆಬೇಕಾದ ಕೆಲಸ ಭಾರತದ ಸಂವಿಧಾನದ ಚೌಕಟ್ಟಿನಲ್ಲಿ ಮತ್ತು ಭಾರತೀಯ ದಂಡ ಸಂಹಿತೆಯಡಿಯಲ್ಲಿ ಸಿಗಬಹುದಾದ ಗರಿಷ್ಠ ಶಿಕ್ಷೆ ಆ ದುರುಳರಿಗೆ ಆಗಬೇಕು‌. ಅವರ ಪರ ಯಾರೂ ವಕಾಲತ್ತು ವಹಿಸಬಾರದು. ನೊಂದ ಪ್ರತಾಪ ಮತ್ತು ಅವನ  ಕುಟುಂಬಕ್ಕೆ ಎಲ್ಲಾ ರೀತಿಯ ರಕ್ಷಣೆ-ಪರಿಹಾರ ಸಿಗಬೇಕು.

 ಇಂಥದ್ದಕ್ಕೆಲ್ಲಾ ಕಾರಣವಾಗುವ ಜಾತಿಯ ಬಗ್ಗೆಗಿನ ಕ್ರೂರ ಸ್ವರೂಪದ ಮೌಢ್ಯ ಬದಲಾಗಬೇಕು. ನಾಗರೀಕ-ಸಮ ಸಮಾಜವೊಂದರ ನಿರ್ಮಾಣವಾಗಬೇಕು.

-ಪ್ರಸನ್ನಕುಮಾರ್ ಕೆರಗೋಡು

Wednesday, 10 October 2018

ವಿಶ್ವ ಮಾನಸಿಕ ಆರೋಗ್ಯ ದಿನದಂದು ಒಂದಿಷ್ಟು ಮಾತು.....


ನಮ್ಮ ಆಲೋಚನೆಗಳ ಫಲಿತಾಂಶ ನಾವು. ನಾವು ಏನನ್ನು ಯೋಚಿಸುತ್ತೇವೆಯೊ ಅದೆ ಆಗುತ್ತೇವೆ. ಏಕೆಂದರೆ ಮನಸ್ಸೆ ಎಲ್ಲವೂ" ಭಗವಾನ್ ಬುದ್ದ ರ ಈ ಮಾತುಗಳು ಎಂದಿಗಿಂತ ಇಂದು ಚೆನ್ನಾಗಿ ಒಪ್ಪುತ್ತವೆ.
ಇಂದು "ವಿಶ್ವ ಮಾನಸಿಕ ಆರೋಗ್ಯ ದಿನ". "ಬದಲಾಗುತ್ತಿರುವ ಜಗತ್ತಿನಲ್ಲಿ ಯುವಜನರು ಮತ್ತು ಮಾನಸಿಕ‌ ಆರೋಗ್ಯ " ಎನ್ನುವುದು ಈ ವರ್ಷದ ಘೋಷ ವಾಕ್ಯ. ದೊಡ್ಡ ಸಂಖ್ಯೆಯ ಯುವಜನತೆಯನ್ನು ತನ್ನ ಒಡಲಲ್ಲಿ ಸಲಹುತ್ತಿರುವ ಭಾರತ ವಿಶ್ವದ ನೈಜ ಯುವ ರಾಷ್ಟ್ರ. ದೇಶದ ಭವಿಷ್ಯ ಯುವಕರ ಮೇಲೆ ಹಾಗೆ ಅವರ ಆಲೋಚನೆಗಳ ಮೇಲೆ‌ ನಿಂತಿದೆ, ಆಲೋಚನೆಗಳನ್ನು ಅವರ ಮನಸ್ಸು ಉತ್ಪಾದಿಸುತ್ತದೆ. ಅದರಿಂದಾಗಿ ಮನಸ್ಸು ಮತ್ತು ಅದರ ಆರೋಗ್ಯ ಮುಖ್ಯವಾಗುತ್ತವೆ.
ಮನುಷ್ಯನ ಮನಸ್ಸು ಇಂದು ಅತ್ಯಂತ ಸಂಕೀರ್ಣವಾಗತೊಡಗಿದೆ. ದೊಡ್ಡದು ಮತ್ತು ವೈಶಾಲ್ಯತೆ, ದೊಡ್ಡದು ಮತ್ತು ಚಿಕ್ಕದು ಅನ್ನುವ ಹಲವು ಚಿಂತನಾತ್ಮಕ ಅಂಶಗಳ ತೊಳಲಾಟದಲ್ಲಿ ಮನಸ್ಸು ಕುಬ್ಜವಾಗತೊಡಗಿದೆ. ಆಸೆ ಮತ್ತು ನಿರೀಕ್ಷೆಗಳು ದೊಡ್ಡದಾಗುತ್ತಿವೆ. ಅಂಥವುಗಳನ್ನು‌ ಪೂರೈಸಲು ಪೂರಕವಾದ ಭೌತಿಕ ವಾತಾವರಣ ನಮ್ಮಲ್ಲಿ ಕಾಣದಾಗಿದೆ. ಈ ಎರಡರ ಮಧ್ಯೆ ಸಿಕ್ಕಿ ಮನೋವೈಕಲ್ಯಕ್ಕೆ ಒಳಗಾಗಿ ನರಳುತ್ತಿರುವವರ ಸಂಖ್ಯೆ ಬಹಳ ದೊಡ್ಡದೆ ಇದೆ.
ಬದುಕಲು ಅಗತ್ಯವಿರುವ ಎಲ್ಲವೂ ಬಹು ಹೆಚ್ಚಿನದಾಗಿಯೆ, ದೊಡ್ಡದೆ ಆಗಿರಬೇಕು ಎಂದು ಎಲ್ಲರೂ ಯೋಚಿಸಿ ಯೋಜಿಸುತ್ತಿರುವ ಈ ಕಾಲಘಟ್ಟದಲ್ಲಿ
ಇ.ಎಫ್.ಶೂಮೇಕರ್ ಅನ್ನುವ ಬ್ರಿಟಿಷ್ ಮೂಲದ ಜರ್ಮನ್ ಅರ್ಥಿಕ ತಜ್ಞ Small is Beautiful ಎನ್ನುವ ಪುಸ್ತಕದಲ್ಲಿ  ಮಂಡಿಸಿರುವ ವಿಚಾರಗಳು ಪ್ರಸ್ತುತವೆನಿಸುತ್ತದೆ. ಗಳಿಸಿದ್ದು, ಗಳಿಸಬೇಕಾದದ್ದು, ಗಳಿಸಲಾರದ ಹಲವುಗಳ ಗೊಂದಲದಲ್ಲಿ ಕಾಲದ ವೇಗದಲ್ಲಿ ಮತ್ತು ಅದರ  ಧಾವಂತದಲ್ಲೆ ಜೀವಿಸುತ್ತಿರುವ ಕಾರಣಕ್ಕಾಗಿಯೆ ಮನಸ್ಸು ಸಂಕೀರ್ಣತೆಗೊಳಗಾಗಿದೆ. ಆ ಸಂಕೀರ್ಣ ಮನೊಸ್ಥಿತಿ ಉಂಟು ಮಾಡುತ್ತಿರುವ ಬೇಸರ, ತಲ್ಲಣಗಳು, ಆ ಮೂಲಕ ಒತ್ತಡ ನಂತರದಲ್ಲಿ ವ್ಯಾಕುಲತೆ ಪರಿಣಾಮವಾಗಿ ನಕಾರಾತ್ಮಕ ಆಲೋಚನೆ, ಖಿನ್ನತೆ ಅಂತಿಮವಾಗಿ ಆತ್ಮಹತ್ಯೆಯ ಆಲೋಚನೆ. ಇದು‌ ಒಂದಕ್ಕೊಂದು ಬೆಸೆದುಕೊಂಡು ಮತ್ತು ಸಾಂಕ್ರಾಮಿಕಗೊಂಡು ಜಗತ್ತಿನ ನಾಗರೀಕ ಸಮಾಜವನ್ನು ಆತಂಕದಲ್ಲಿ ದೂಡಿರುವುದು.
ಆಧುನಿಕವಾದ ಯಾಂತ್ರಿಕ ನಾಗರೀಕ ವ್ಯವಸ್ಥೆ ಸೃಷ್ಟಿಸಿರುವ ಖಿನ್ನ ವಾತಾವರಣಕ್ಕೆ ಕೇವಲ ಯುವಜನರಷ್ಟೆ ಬಲಿಯಾಗುತ್ತಿಲ್ಲ. ಹಸುಗೂಸುಗಳಾದಿಯಾಗಿ ಲಿಂಗ, ಜಾತಿ, ವರ್ಗ, ಧರ್ಮವೆನ್ನದೆ ವೃದ್ದರವರೆಗೆ ಇದು ಹರಡಿಕೊಂಡಿದೆ. ಬುದ್ದ ಹೇಳುವ ಹಾಗೆ ಇದೆಲ್ಲದರ‌ ಮೂಲ ಮನಸ್ಸೆ ಆದ್ದರಿಂದ ಮನಸ್ಸು ಮಾತ್ರ ಇದಕ್ಕೆಲ್ಲಾ ಪರಿಹಾರ ಒದಗಿಸಬಲ್ಲದು. ಹಾಗೆ ಪರಿಹಾರ ನೀಡುವ ಮನಸ್ಸೆ ಕೆಟ್ಟಿದೆ ಅಂದರೆ ಇನ್ಯಾರು ಈ ಕೆಲಸ ಮಾಡುವವರು. ಇದ್ದುದರಲ್ಲಿ ಸ್ವಾಸ್ಥ್ಯ ಕಾಪಾಡಿಕೊಂಡ ಕೆಲ ಮನಸ್ಸುಗಳಾದರೂ ಈ ಕೆಲಸ ಕೈಗೆತ್ತಿಕೊಳ್ಳಬೇಕು. ಹಾಗೆ ಒಂದಷ್ಟು ಕರಪ್ಟ್ ಆಗಿರದ ಮನಸ್ಸುಗಳು ಎಂದರೆ ಅದು ಮಕ್ಕಳು ಮತ್ತು ಯುವಜನತೆಯದು. ಇಲ್ಲಿಂದಲೆ ಪರಿಹಾರ ಹುಡುಕುವ ಪ್ರಯತ್ನ ಆಗುವುದು ಒಳಿತು.
ಧನಾತ್ಮಕ ಚಿಂತನೆ ನಡೆಸುವ ಒಂದಷ್ಟು ಮಂದಿ ಸೇರಿ ಪ್ರಪಂಚದಾದ್ಯಂತ ಲಭ್ಯವಿರುವ ವ್ಯಾಕುಲತೆಯನ್ನು ಮತ್ತು ಖಿನ್ನತೆಯನ್ನು ದೂರಮಾಡುವ ಕೌಶಲಗಳನ್ನು ಪಡೆದು ಕಾರ್ಯಪ್ರವೃತ್ತವಾಗಬೇಕಿದೆ. ಅದಕ್ಕೂ ಮುಂಚೆ ಅತಿಯಾದ ಆಸೆಗಳ ಬೀಜ ಬಿತ್ತುವ ಅಂಶಗಳನ್ನು ಬಗ್ಗು ಬಡಿದು ಮುಂದುವರೆಯಬೇಕಿದೆ.
-ಪ್ರಸನ್ನಕುಮಾರ್ ಕೆರಗೋಡು


Monday, 4 June 2018

ಯುವಜನತೆಯೂ....ಪರಿಸರ ಪ್ರಜ್ಞೆಯೂ...

ಯುವಜನತೆಯೂ...ಪರಿಸರ ಪ್ರಜ್ಞೆಯೂ.

ಯಾಕೊ ಪರಿಸರ ದಿನದ ಗುಂಗಿನಲ್ಲಿರುವ ಈ ಹೊತ್ತಿನಲ್ಲಿ ನನಗಿಷ್ಟವಾದ ಈ ಕೆಳಗೆ ಪ್ರಸ್ತಾಪಿಸಿರುವ ಎರಡು ಕವಿಸಂತರುಗಳ ಪ್ರಖ್ಯಾತ ಸಾಲುಗಳು ಎಡೆಬಿಡದೆ ಕಾಡುತ್ತಿವೆ.

....ಪ್ರಕೃತಿ ದೇವಿಯ ಸೊಬಗು ದೇಗುಲದಿ,
ಆನಂದವೇ ಪೂಜೆ, ಮೌನವೇ ಮಹಾ ಸ್ತೋತ್ರ

ತನ್ನನ್ನು ಜನ್ಮಿಸಿದ ತನಗೆ ಮನದೊಳಗಣ ಅಕ್ಷರದ ಮಹಾದೀಕ್ಷೆಯ ಧ್ಯಾನ ದಯಪಾಲಿಸಿದ ಕವಿಶೈಲದಲ್ಲಿ ನಿಂತು ಪ್ರಾಯಶಃ ಕವಿ ಸಂತ ಕುವೆಂಪು ಈ ಸಾಲುಗಳನ್ನು ಬರೆದಿರಬೇಕು. ಪ್ರಕೃತಿ ದೇಗುಲವಾಗಿದೆ, ಅದು ಸೊಬಗನ್ನು ಮೈದುಂಬಿಕೊಂಡಿದೆ, ಅದರಿಂದ ಆನಂದವಾಗಿದೆ, ಆ ಆನಂದವೇ ಪೂಜೆಯಾಗಿದೆ, ಅಲ್ಲಿನ ಮೌನವೇ ಮಹಾ ಸ್ತೋತ್ರವಾಗಿದೆ ಅವರಿಗೆ.

......well pleased to recognise
In nature and the language of the sense
The anchor of my purest thoughts, the nurse,
The guide, the guardian of my heart, and soul
Of all my moral being.

ಇಂಗ್ಲೇಡಿನ ಪ್ರಕೃತಿ ಕವಿ ವಿಲಿಯಂ ವರ್ಡ್ಸ್ ವರ್ತ್ ನ "ಟಿಂಟರ್ನ್ ಅಬ್ಬಿ" ಎನ್ನುವ ಈ ಕವಿತೆಯಲ್ಲಿ ಪ್ರಕೃತಿಯಲ್ಲಿ ಕವಿ ಅವನ ಪವಿತ್ರ ಆಲೋಚನೆಗಳ ಆಧಾರವನ್ನು ಕಂಡುಕೊಂಡಿದ್ದಾನೆ, ಅಷ್ಟೆ ಅಲ್ಲ, ತನ್ನ ಹೃದಯದ ದಾದಿಯನ್ನು, ಮಾರ್ಗದರ್ಶಕನನ್ನು, ಮಹಾ ಪೋಷಕನೋರ್ವನನ್ನು ಹಾಗೆಯೇ ತನ್ನ ನೈತಿಕ ಪ್ರಜ್ಞೆಯ ಆತ್ಮವನ್ನೂ ಕೂಡ.

ಅಪ್ಪಟ ಹಸಿರಿನ ವೈಭವ ಮತ್ತು ಆತ್ಮ ಸಾಕ್ಷಾತ್ಕಾರದ ಜ್ಞಾನದೋದಯ ಮಾಡಿಸುವ ಈ ಕವಿತೆಗಳಲ್ಲಿ ಕಾಣುವ ಅಥವಾ  ಸ್ವಾಭಾವಿಕ ಮತ್ತು ಭೌತಿಕ ಜಗತ್ತನ್ನು ನಿಸರ್ಗ ಅಥವಾ ಪ್ರಕೃತಿ ಎಂದು ನನ್ನ ಸುತ್ತಲಿನ ಪರಿಸರವನ್ನು ಪರಿಗಣಿಸಿ ಕರೆಯುವಾಗ ಯಾಕೊ ಇಂದು ನನಗೆ ಅಳುಕಾಗುತ್ತದೆ. ನನ್ನೊಳಗಿನ ನೈತಿಕ ಪ್ರಜ್ಞೆ ತಾಕಾಲಾಟಕ್ಕೊಳಗಾಗುತ್ತದೆ.

ಬಾಲ್ಯದಿಂದಲೂ ನನ್ನೂರಿನ ಹಸಿರ ಗದ್ದೆಗಳಲ್ಲಿ,  ಹಸಿರಿನ ಅಗಲವಾದ ಎಲೆಗಳನ್ನೂ ಮರೆಮಾಚಿದ್ದ ಕೆಂಡದಂತ ಕೆಂಪಿನ ಮುತ್ತುಗದ ಹೂವುಗಳನ್ನು ಆಯ್ದು-ಆಟವಾಡಿ, ಅದೆಷ್ಟೊಂದೊ ಮರಗಳ ನಡುವೆ ಹರಿಯುತ್ತಿದ್ದ ಒಂಬತ್ತನೆ ನಾಲೆಯ "ದೊಡ್ಡಕಾಲುವೆ"ಯಲ್ಲಿ ಗೆಳೆಯರೊಡನೆ ಜೂಟಾಟವಾಡಿ, ಈಜಾಡಿ, ಊರಿನ ದೊಡ್ಡ ಕೆರೆಗೆ ವಾರಾಂತ್ಯಗಳಲ್ಲಿ ಎಮ್ಮೆಗಳನ್ನು ಮೇಯಲು ಬಿಟ್ಟು ನೈಸರ್ಗಿಕ ತೆಪ್ಪಗಳೊಡನೆ ತೇಲಿ, ನನ್ನ ಬಾಲ್ಯದ ಪ್ರತಿಮೆಗಳೇ ಆಗಿಹೋಗಿದ್ದ ಹತ್ತಿ-ಹುಣಿಸೆಮರಗಳ ನೆರಳಲ್ಲಿ ಗೆಳೆಯರೊಡನೆ ಹರಟೆಹೊಡೆದು, ಬೂರುಗದ ಮರಹತ್ತುವಾಗ ಜಾರಿ ೧೨-೧೩ ಅಡಿಗಳ ಎತ್ತರದಿಂದ ಕೆಳಗೆ ಬಿದ್ದು ಬೆನ್ನು ನೋವು ತಂದುಕೊಂಡ ಅಥವಾ ಇಂತಹ ಅದೆಷ್ಟೋ ಹಸಿರ ನಡುವಿನ ನೆನಪುಗಳನ್ನು ಈಗ ನೆನಪುಗಳನ್ನಾಗಿ ಮಾತ್ರವೇ ನೆನಪಿಸಿಕೊಳ್ಳಬೇಕಿದೆ. ಸಧ್ಯ ಅವುಗಳೆಲ್ಲದರ ಕಡೆ ಒಮ್ಮೆ ಹೋಗಿ ನೋಡಿದರೆ  ಹೃದಯದಲ್ಲಿ ಬೇನೆಯಾಗುತ್ತದೆ. ಆ ದಿನಗಳ ನೆನಪುಗಳ ಹಸಿರೂ ಮಾಯವಾಗಿ ಅಲ್ಲಿನಂತೆಯೆ ಬೋಳಾಗಿ ಬೆಂಗಾಡಾಗುವ ಅನುಭವವಾಗುತ್ತದೆ.

ನನಗೆ ಪ್ರಕೃತಿ ಎಂದರೆ ಅನೂಹ್ಯ ಸ್ವಾತಂತ್ರ್ಯ, ಶಕ್ತಿ, ಬೆಳಕು, ಕಾವ್ಯ, ವೈಭವ, ಸರಳತೆ, ಬದ್ದತೆ, ಶಿಸ್ತು, ಹಸಿವು-ದಾಹ, ತೃಪ್ತಿ, ತಾಳ್ಮೆ, ತಾಯ್ತನ ಮತ್ತು ಪ್ರೀತಿ‌. ಮತ್ತು ಅಲ್ಲಿ ನನಗೆ ಸ್ವಲ್ಪವೆ ಸಿಟ್ಟು ಕೂಡ ಕಾಣಿಸುತ್ತದೆ. ಅದೂ ಕೂಡ ಸಾತ್ವಿಕ ಸಿಟ್ಟು.

ಪ್ರೀತಿ ಇಲ್ಲದ ಮೇಲೆ..
ಹೂವು ಅರಳೀತು ಹೇಗೆ ?
ಮೋಡ ಕಟ್ಟೀತು ಹೇಗೆ ?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ ?"

ಕವಿ ಜಿ.ಎಸ್.ಎಸ್ ರ ಈ ಗೀತೆಯಲ್ಲಿ ಪ್ರೀತಿ ಎನ್ನುವ ಪ್ರತಿಮಾ ಸ್ವರೂಪದ ಭಾವವನ್ನು ಕವಿ ಪ್ರಕೃತಿಯ ಅನನ್ಯ ಕಾಣಿಕೆ ಎಂದೇ ಭಾವಿಸಿದ್ದಾರೆ. ಅದಿಲ್ಲಿ ನಿಚ್ಚಳವಾಗಿ ವೇದ್ಯವಾಗುತ್ತದೆ.

ಹೀಗೆ ಪ್ರಿತಿಯನ್ನು ಬೇಷರತ್ ಆಗಿ ನೀಡುವ ಹಸಿರಿನ ಸ್ಥಿತಿಗತಿ ಸಧ್ಯ ಭೂಮಿಯ ಮೇಲೆ ಆತಂಕದಲ್ಲಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಪ್ರಕೃತಿಯ ಜೊತೆಗಿನ ನಮ್ಮೆಲ್ಲರ ಅವೈಜ್ಞಾನಿಕ ನಡವಳಿಕೆಯಿಂದಾಗಿ ಹಸಿರಿನ‌ ಪ್ರದೇಶವೆಲ್ಲವೂ ಬರಡು ಪ್ರದೇಶವಾಗುತ್ತಿವೆ.

ಕಾಲ ಮತ್ತು ಋತುಗಳ ವಿಷಯದಲ್ಲಿ ಅಲ್ಪ ಪ್ರಮಾಣದ ವ್ಯತ್ಯಾಸಗಳ ಜೊತೆಗೆ ನಾವು ಪ್ರಾಕೃತಿಕವಾದ ಅದೆಷ್ಟೊ ವೈಪರೀತ್ಯಗಳನ್ನು ಕಾಣುವಂಥಾಗಿದೆ. ಜಗತ್ತಿನಾದ್ಯಂತ ತಾಪಮಾನ ಏರಿಕೆಯಾಗುತ್ತಿದೆ. ಧ್ರುವ ಪ್ರದೇಶಗಳ ನೀರ್ಗಲ್ಲುಗಳು ಅಪಾಯದ ಮಟ್ಟದಲ್ಲಿ ಕರಗುತ್ತಿವೆ ಮತ್ತು ಅದರಿಂದಾಗಿ ಸಾಗರಗಳ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಜಲಚರಗಳು ಅಳಿವಿನಂಚಿನ ಮಿತಿ ಮೀರುತ್ತಿವೆ. ಇನ್ನು ಭೂಭಾಗದಲ್ಲಿ ಮಳೆಯ ಪ್ರಮಾಣ ಅತಿ ಹೆಚ್ಚಾಗುವಿಕೆ ಅಥವಾ ಕೊರತೆ,  ಜಲಮೂಲಗಳ ಬತ್ತುವಿಕೆ, ಅಂತರ್ಜಲ ಕುಸಿತ ಮುಂತಾದ ಅದೆಷ್ಟೊ ಅನಾಹುತಗಳನ್ನು ಕಣ್ಣಾರೆ ಕಾಣುವಂಥಾಗಿದೆ.

ಕಳೆದ ಫೆಬ್ರವರಿಯಲ್ಲಿ ಕೇಂದ್ರ ಪರಿಸರ ಸಚಿವ ಡಾ.ಹರ್ಷವರ್ಧನರವರು ಬಿಡುಗಡೆ ಮಾಡಿದ India State of Forest Report 2017 ರಲ್ಲಿ ಅತಿಹೆಚ್ಚು  ಕಾಡುಗಳ ಭೌಗೋಳಿಕ ಪ್ರದೇಶ ಹೊಂದಿರುವ ಮೊದಲ‌ ಹತ್ತು ರಾಷ್ಟ್ರಗಳಲ್ಲಿ ಭಾರತವೂ ಕೂಡ ಸ್ಥಾನ ಪಡೆದುಕೊಂಡಿದೆ. ಇದು ಮೇಲ್ನೋಟಕ್ಕೆ ನೋಡಿದರೆ ಹೆಮ್ಮೆಯ ಸಂಗತಿಯೆ. ಕಳೆದ 2015 ರ ಇದೆ ವರದಿಯ ಅನುಸಾರ ನಮ್ಮ ದೇಶದಲ್ಲಿ ಶೇ 24.16 ರಷ್ಟಿದ್ದ ಅರಣ್ಯ ಪ್ರದೇಶ 2017 ರ ವರದಿಯಲ್ಲಿ ಶೇ 24.39 ರ ಅಲ್ಪ ಹೆಚ್ಚಳವನ್ನು ದಾಖಲಿಸಿದೆಯಾದರೂ ಒಟ್ಟಾರೆಯಾಗಿ  ಒಂದು ರಾಷ್ಟ್ರದ ಬಯಲು ಪ್ರದೇಶದ ಶೇ 33 ರಷ್ಟು ಮತ್ತು ಪರ್ವತ ಪ್ರದೇಶದ ಶೇ 66 ರಷ್ಟು ಅರಣ್ಯ ಪ್ರದೇಶವಿರಬೇಕು ಎನ್ನುವ  ಮಾನದಂಡದ ಅಭಿಪ್ರಾಯದ ಹಿನ್ನೆಲೆಯಲ್ಲಿ ನೋಡಿದರೆ ಭಾರತ ಅಪಾಯಕಾರಿ ಹಿನ್ನೆಡೆಯನ್ನು ಕಾಣುತ್ತಿದೆ. ಬಹುಶಃ ಅರಣ್ಯ ಪ್ರದೇಶಗಳು ಬರಡು ಭೂಮಿಯಾಗುತ್ತಿರುವ ಈ ಸಂದರ್ಭದಲ್ಲಿ ಹಿಂದೆಂದಿಗಿಂತ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ನಮಗಿದೆ ಎಂದು ನನಗನ್ನಿಸುತ್ತಿದೆ. ಸರ್ಕಾರ ಅಥವಾ ವ್ಯವಸ್ಥೆ ಇದನ್ನು ಸಮರ್ಪಕ ರೀತಿಯಲ್ಲಿ ವ್ಯವಹರಿಸುತ್ತದೆ ಎನ್ನುವ ಎಲ್ಲ ಸತ್ಯವನ್ನು ಮನಗಾಣುವುದರ ಜೊತೆಗೆ ಪ್ರತಿ ವ್ಯಕ್ತಿ ತನ್ನ ಪಾಲಿನ ಸಕಾರಾತ್ಮಕ ಕೊಡುಗೆ ನೀಡುವಂತ ಮನೋ ಪ್ರವೃತ್ತಿಯಲ್ಲಿ ಪ್ರಗತಿಯಾಗಬೇಕಿದೆ.


ನನ್ನ ಆಶಾಭಾವನೆ ಏನೆಂದರೆ, ಇಂತಹ ಪ್ರಕ್ಷುಬ್ಧ ಸ್ಥಿತಿಯಲ್ಲಿ
ನಾವು ಸಧ್ಯದ ಯುವಜನತೆಯ ಮೇಲೆ ನಂಬಿಕೆ ಇರಿಸಬಹುದಾಗಿದೆ. ತಮ್ಮಗಳ ಭಾವನೆ ಮತ್ತು ಕೆಲಸದ ವೈಖರಿಯನ್ನು ಅದೆಷ್ಟೊ ಯುವಕರು ಇಂದು ಬದಲಾಯಿಸಿಕೊಂಡಿದ್ದಾರೆ.ಅಲ್ಲೆಲ್ಲೊ ಪರಿಸರ ಶಿಬಿರಗಳನ್ನು ಮಾಡುವೆವು ಎಂದಾಗ ನಿಗಧಿತ ಸಂಖ್ಯೆಗಿಂತ ಹೆಚ್ಚಿನ ಯುವಕ-ಯುವತಿಯರು ನಮ್ಮ "ಕ್ರಿಯಾ"ದ ಜೊತೆ ಸೇರುತ್ತಾರೆ. ಪ್ರಾಮಾಣಿಕವಾಗಿ ವಿಷಯ ಗ್ರಹಿಸುತ್ತಾರೆ, ನಮ್ಮೊಡನೆ ಕೆಲಸ ಮಾಡುತ್ತಾರೆ ಮತ್ತು ಮುಂದಿನ ಈ ರೀತಿಯ ಕಾರ್ಯಕ್ರಮಗಳ ಮಾಹಿತಿ ಪಡೆದು ತಾವು ಮತ್ತೆ ಹಾಜರಾಗಿ ಮತ್ತಷ್ಟು ಮಂದಿ ಸಮಾನ ಮನಸ್ಕರನ್ನು  ಕರೆತಂದು ಅವರನ್ನೂ ತೊಡಗಿಸುತ್ತಾರೆ. ಆ ಎಲ್ಲರೂ ಅಪರಿಮಿತವಾದ ಪರಿಸರ ಪ್ರಜ್ಞೆಯನ್ನು ಹೊಂದಿ ಅದನ್ನು ಕಾರ್ಯರೂಪದಲ್ಲಿ ರೂಡಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ಸಂತೋಷ ಎಂದರೆ ಇಂತಹ ನಮ್ಮ ಶಿಬಿರಗಳಲ್ಲಿ ಮಧ್ಯ ವಯಸ್ಕರು, ಹಿರಿಯರು, ಗೃಹಿಣಿಯರು ಹೀಗೆ ಎಲ್ಲರೂ ಪಾಲ್ಗೊಳ್ಳುತ್ತಿದ್ದಾರೆ.

ಅದಷ್ಟರ ಮಟ್ಟಿಗೆ ನಾವು ತೃಪ್ತಿ ಪಟ್ಟುಕೊಳ್ಳದೆ ಇನ್ನಷ್ಟು ಮತ್ತಷ್ಟು ಯುವಜನತೆಗೆ ಮತ್ತು ಎಲ್ಲರಿಗೂ ಪರಿಸರ ರಕ್ಷಣೆಯ ದೀಕ್ಷೆ ನೀಡಿ ಅವರನ್ನು ಬಯಲಿಗೆ ಬಿಡುವ ಜೊತೆಗೆ ವೈಜ್ಞಾನಿಕವಾಗಿ ಪರಿಸರ ರಕ್ಷಣೆಯ ತಂತ್ರಗಳನ್ನು ಅಳವಡಿಸಿಕೊಳ್ಳು ಅಗತ್ಯವಿದೆ.

                                                -ಪ್ರಸನ್ನಕುಮಾರ್ ಕೆರಗೋಡು

Saturday, 26 May 2018

"ನಾನೆಂಬ ಸೋಮಾರಿ"

ನಾನೆಂಬ ಸೋಮಾರಿ
ಅದ್ಯಾಕೋ...ನನಗೆ ಬರವಣಿಗೆ ಪ್ರಕ್ರಿಯೆಯು ಆಗಿ ಬರುವುದೆ ಇಲ್ಲ. ಶುದ್ದ ಸೋಮಾರಿ‌ ನಾನು ಈ ವಿಷಯದಲ್ಲಿ. ಅದೆಷ್ಟೊ ಬಾರಿ ಅಂದುಕೊಳ್ಳುತ್ತೇನೆ, ಕುಳಿತು ಬರೆಯುವ ತಾಳ್ಮೆ ತಂದುಕೊಳ್ಳಬೇಕು, ಮನಸ್ಸಿನಲ್ಲಿ ಮೂಡುವ ಅವೆಷ್ಟೋ ಅಲೋಚನೆಗಳಿಗೆ ಅಕ್ಷರಗಳ ರೆಕ್ಕೆ ಕಟ್ಟಬೇಕು, ರೆಕ್ಕೆ ಬಡಿಯುತ್ತಾ ಅವು ದೂರ ಹಾರಿ ಹೋಗಿ ದೂರದೂರದ ಮನಸ್ಸುಗಳಿಗೆ ನನ್ನೊಳಗಿನ ಭಾವದ ತಂಗಾಳಿ ಬೀಸಬೇಕು ಎಂದು. ಅದೆಂಥಾ ಘನ ಮೈಗಳ್ಳತನ ನನ್ನದು ಎಂದು ಸಾಕಷ್ಟು ಬಾರಿ ಹಳಿದುಕೊಂಡಿದ್ದು, ಬೇಸರಪಟ್ಟುಕೊಂಡದ್ದು ಮತ್ತು ಶಪಿಸಿಕೊಂಡದ್ದೂ ಇದೆ. 
ಒಮ್ಮೊಮ್ಮೆ ಬರವಣಿಗೆ ವ್ಯರ್ಥವಲ್ಲವೆ ಎಂದೂ ಅನಿಸಿದ್ದಿದೆ. ಅದರಿಂದ ಭೌತಿಕವಾಗಿ ಏನೂ ಆಗುವುದಿಲ್ಲವಲ್ಲ, ಯಾರಲ್ಲೂ ಗಣನೀಯ ಬದಲಾವಣೆ ತರಲಾರದಲ್ಲ, ಹಸಿವುಗಳ ಹೊಟ್ಟೆ ತುಂಬಿಸಲಾರದಲ್ಲ...ಹೀಗೆ ಏನೇನೊ. ಅವೆಲ್ಲಾ ನನ್ನ ಹುಂಬ ಅನಿಸಿಕೆಗಳು ಎನ್ನುವುದೂ ನನಗೆ ತಿಳಿದಿದೆ. "ಖಡ್ಗವಾಗಲಿ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣ ಮಿತ್ರ" ಎನ್ನುವ ಕನ್ನಡ ಬಂಡಾಯ ಸಾಹಿತ್ಯದ ಆಶಯ ನುಡಿಯಂತೆ ಬರೆಯುವುದೆ ಆದರೆ ಹೀಗಿರಬೇಕು ಎನ್ನುವುದು ನನ್ನ ಆಲೋಚನೆ.
ಅಂಕಣ ಬರೆಯಲು ಇತ್ತೀಚೆಗೆ ಬಂದ ಪತ್ರಿಕೆಯೊಂದರ ಆಹ್ವಾನಕ್ಕೆ ನಾನು ಕೊಟ್ಟ ಕಾರಣ ಮೂರ್ಖತನದ್ದಾಗಿತ್ತು. ಕ್ರಿಯಾದ ಕೆಲಸಗಳಿಗೆ ಅಡೆತಡೆಯಾದೀತು ಎಂದು. ಮನಸ್ಸು ಹಾಗೆ Self Defence ಮಾಡಿಕೊಳ್ಳುತ್ತದೆ ಸರಿಯಾದ ಕಾರಣ ಇಲ್ಲದಿದ್ದಾಗ. ಕ್ರಿಯಾ ಕೆಲಸವನ್ನು "ಕ್ರಿಯಾ"ದ ಹುಡುಗರು ಮಾಡಿಕೊಂಡು ಹೋಗುತ್ತಿದ್ದಾರೆ. ಹಾಗೆ ನೋಡಿದರೆ ಅವರೆ ಅದರ ನಿಜವಾದ ವಾರಸುದಾರರು. ನಾನು ಒಂದಷ್ಟು ಯೋಜನೆಗಳನ್ನು ರೂಪಿಸಿಕೊಡುತ್ತೇನೆ ಅಷ್ಟೆ. ಒಟ್ಟಾರೆಯಾಗಿ ನನ್ನವಳು ವ್ಯಾಖ್ಯಾನಿಸುವ ಹಾಗೆ‌ ನಾನೊಬ್ಬ "ಪರಮ ಸೋಮಾರಿ", ಈ ವಿಷಯದಲ್ಲಿ.
ಈ ಬ್ಲಾಗಿನಲ್ಲಿ ಬರೆಯುವ ಅದೆಷ್ಟೊಂದೊ ವಿಚಾರಗಳಿದ್ದವು ಕಳೆದ ಕೆಲವು ವಾರಗಳಲ್ಲಿ. ಯುವಕರೊಟ್ಟಿಗೆ ಮಾತ್ರ ಸಂವಾದಿಸುತ್ತಿದ್ದ ನಾನು ಇತ್ತೀಚೆಗೆ ಪ್ರೌಢಶಾಲಾ ಮಕ್ಕಳು, ಉದ್ಯೋಗಸ್ಥ ಪುರುಷ ಮತ್ತು ಮಹಿಳೆಯರು, ಗೃಹಿಣಿಯರು, ಶಿಕ್ಷಣ ಸಂಸ್ಥೆಗಳ ಅಧ್ಯಾಪಕರು, ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು, ವಿಕಲಚೇತನರು,  ಜನಪದ ಕಲಿಯಲು ಬರುವ ಸೃಜನಶೀಲ ಕಲಾಸಕ್ತರು ಹೀಗೆ ಹಲವು ಸ್ಥರದ ವ್ಯಕ್ತಿಗಳೊಡನೆ ಸಂವಾದಿಸಲು ಪ್ರಾರಂಭಿಸಿದೆ. ನಿಜ, ಅದ್ಬುತ ಜಗತ್ತು ಇವರದೆಲ್ಲ. 
ಸಣ್ಣ ಸಣ್ಣ ಸಂತೋಷಗಳನ್ನು ಭಾರಿಯಾಗಿ ಎಂಜಾಯ್ ಮಾಡುತ್ತಾರೆ. ಹಾಗೆ ಕ್ಷುಲ್ಲಕ ಸಮಸ್ಯೆಗಳಿಗೂ ಕುಸಿದೇ ಹೋಗುತ್ತಾರೆ. ಮತ್ತು ಹುಡುಕಿದರೆ ಅಲ್ಲಿ ನೋವುಗಳಿವೆ, ನಿರಾಶೆಗಳಿವೆ, ಹತಾಶೆಗಳಿವೆ, ಸಿಟ್ಟು -ಸೆಡವುಗಳಿವೆ, ಕಷ್ಟದ ಕೋಟಲೆಗಳಿವೆ. ಆದರೆ ಅವಷ್ಟೂ ಒಡಲುಗಳಲ್ಲಿ ಇವೆಲ್ಲವನ್ನು ಸುಟ್ಟುಬಿಡುವ ಅಗ್ನಿಯುಂಡೆಗಳೂ ಇವೆ. ಸುಟ್ಟ ನಂತರದಲ್ಲಿ ಸ್ನೇಹದ, ಪ್ರೀತಿಯ, ನಲಿವಿನ ತಂಗಾಳಿ ಸೃಷ್ಟಿಸುವ ಭಾವುಕ ಮನಸ್ಸುಗಳೂ ಇವೆ.
ನನಗೆ ಗೊತ್ತಿದೆ. ಜಗತ್ತಿನಲ್ಲಿ ಪರಿಪೂರ್ಣವಾಗಿ ಯಾರೂ ಕೆಟ್ಟವರಿಲ್ಲ ಮತ್ತು ಒಳ್ಳೆಯವರೂ ಇಲ್ಲ. ಹಾಗೆಯೆ ಇಲ್ಲಿ ಯಾರೂ ಸುಖಿಗಳೂ ಇಲ್ಲ, ಯಾರೂ ದುಃಖಿತರೂ ಇಲ್ಲ.
ಈ ಎರಡರ ನಡುವೆ ಸಿಕ್ಕಿಕೊಂಡು ಒದ್ದಾಡುತ್ತಿರುವವರು‌ ಮಾತ್ರ ಇದ್ದಾರೆ. ಅವುಗಳಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿರುವವರು ಮಾತ್ರವೆ ಇದ್ದಾರೆ.
ಬ್ರೆಜಿಲ್ ಕಾದಂಬರಿಕಾರ ಪಾಲ್ ಕೊಯೆಲ್ಹೊ ಹೀಗೊಂದು ಅರ್ಥ ಬರುವ ಹಾಗೆ ಹೇಳುತ್ತಾನೆ. "ಜಗತ್ತಿನ ಆತ್ಮದೊಳಗೆ ಹೊಕ್ಕ ನಿನಗೆ ಅಂತಿಮವಾಗಿ ನಿನ್ನ ಆತ್ಮವೇ ಸಿಗುತ್ತದೆ" ಹೌದು, ಅವರೊಡನೆ ಬೆರೆಯುತ್ತಾ,, ಅವರೊಳಗೆ ಇಳಿಯುತ್ತಾ,, ಅವರನ್ನು ಅರ್ಥೈಸಿಕೊಳ್ಳುತ್ತಾ ಇರುವ ಹಾಗೆಲ್ಲ ನನ್ನೊಡನೆ ನಾನೆ ಹೆಚ್ಚೆಚ್ಚು ಬೆರೆತ ಹಾಗೆ, ನನ್ನೊಳಗೆ ನಾನೆ ಹೆಚ್ಚೆಚ್ಚು ಇಳಿದ ಹಾಗೆ ಮತ್ತು ನನ್ನನ್ನು‌ ನಾನೆ ಹೆಚ್ಚೆಚ್ಚು ಅರ್ಥೈಸಿಕೊಳ್ಳುತ್ತಿದ್ದೇನೆ ಎಂಬ ಭಾವ ಮೂಡುತ್ತಿದೆ. ಒಟ್ಟಾರೆ ಮನುಷ್ಯನೊಡನಿನ ಒಡನಾಟ ದಿನನಿತ್ಯವೂ ಹೊಸ ಲೋಕವೊಂದರ ಜೊತೆಗಿನ ಒಡನಾಟ.
ದಿನದ ಅಷ್ಟೂ ಹೊತ್ತು‌ ಬಿಡುವಿಲ್ಲದೆ ಏನನ್ನಾದರೂ ಮಾಡುತ್ತಾ ಇದ್ದರೂ ಇನ್ನೂ ಸಮಯ ಉಳಿದಿರುತ್ತದೆ. ಅದು ಸಮರ್ಪಕವಾಗಿ ಬಳಕೆಯಾಗದಲ್ಲ ಎನ್ನುವ ಕಾರಣದಿಂದ ಏನಾದರೂ ಬರೆಯುವ ಎಂದರೆ ಮನಸ್ಸು ಏನೇನೊ‌ ಸಬೂಬುಗಳನ್ನು ತಂದು ಮುಂದಿಡುತ್ತದೆ. "ನಿನ್ನ ಕೆಲಸಗಳನ್ನು ಈ ಜಗತ್ತು ಬಹಳ ಬೇಗ ಮರೆಯುತ್ತದೆ. ಆದರೆ, ಏನಾದರು ಬರಿ, ಅದು ಉಳಿಯುತ್ತದೆ " ಅಂಥಲೂ ಅನಿಸುತ್ತದೆ. ನೋಡುವಾ ಮುಂದೆ.
ಅಭಿಪ್ರಾಯ ತಿಳಿಸಿ ಗೆಳೆಯರೆ.

ನಿಮ್ಮವ
-ಪ್ರಸನ್ನಕುಮಾರ್ ಕೆರಗೋಡು

Sunday, 4 February 2018

ಉನ್ನತ ಶಿಕ್ಷಣ ಮತ್ತು ಭಾರತ

ಉನ್ನತ ಶಿಕ್ಷಣ ಮತ್ತು ಭಾರತ

ನನ್ನ ಅಪ್ಪನ ನೆನಪುಗಳನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳಲು ಕಳೆದ ಜನವರಿ 31 ರಂದು ಪ್ರಕಟವಾಗಿದ್ದ ನನ್ನ "ಅಣ್ಣನ ನೆನಪು" ಬರಹಕ್ಕೆ ಸಿಕ್ಕ ಬರಪೂರ ಪ್ರತಿಕ್ರಿಯೆ ನನ್ನ ಬ್ಲಾಗ್ ಬರಹಕ್ಕೆ ಮತ್ತಷ್ಟು ಒತ್ತಾಸೆ ನೀಡಿದೆ.

ಸಧ್ಯ ಕಳೆದ ಜನವರಿಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿದ ಭಾರತದ ಉನ್ನತ ಶಿಕ್ಷಣಕ್ಕೆ ದಾಖಲಾಗುತ್ತಿರುವವರ ವಿವರಗಳನ್ನೊಳಗೊಂಡ ವರದಿಯ ಬಗ್ಗೆ ಚರ್ಚೆ ಮಾಡಬೇಕೆನಿಸಿದೆ. ಪ್ರತಿವರ್ಷ ಜನವರಿಯಲ್ಲಿ ಬಿಡುಗಡೆಯಾಗುವ ಈ ವರದಿ ದೇಶ ಮತ್ತು ರಾಜ್ಯಗಳಲ್ಲಿ 18-23 ವರ್ಷ ವಯೋಮಾನದ ಲಿಂಗವಾರು ಮತ್ತು ಪ್ರವರ್ಗವಾರು ಯುವಜನತೆ ಯಾವ ಪ್ರಮಾಣದಲ್ಲಿ ಉನ್ನತ ಶಿಕ್ಷಣದ ವಿವಿಧ ಕೋರ್ಸುಗಳಿಗೆ   ದಾಖಲಾಗುತ್ತಿದ್ದಾರೆ, ಉನ್ನತ ಶಿಕ್ಷಣ ಸಂಸ್ಥೆಗಳ ಹೆಚ್ಚಳ, ವಿವಿಧ ದೇಶಗಳ ಜೊತೆ ಹೋಲಿಕೆ ಮಂತಾದ ಮಾಹಿತಿಗಳನ್ನು ನೀಡುತ್ತದೆ.
ಈ ಸಮೀಕ್ಷೆಯಿಂದಾಗಿ ಈ ಕೆಳಕಂಡ ಮಾಹಿತಿಗಳು ಲಭ್ಯವಾಗಿ ಅವುಗಳಲ್ಲಿ‌ನ ನ್ಯೂನತೆಗಳನ್ನು ಸರಿಪಡಿಸಿ ಶೈಕ್ಷಣಿಕ ಪ್ರಗತಿಗೆ ಒತ್ತು ಕೊಡಲು ಅನುಕೂಲವಾಗುತ್ತದೆ.

1. ದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ದಾಖಲಾಗುವ ಯುವಜನತೆಯ ಪ್ರಮಾಣ.
2. ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಮತ್ತು ಗುಣಮಟ್ಟದ ಮಾಹಿತಿ.
3. ಶಿಕ್ಷಕ-ವಿದ್ಯಾರ್ಥಿ ಅನುಪಾತ
4. ರಾಜ್ಯ-ಕೇಂದ್ರಾಡಳಿತ ಪ್ರದೇಶಗಳ ಶೈಕ್ಷಣಿಕ ಪ್ರಗತಿಯ ತೌಲನಿಕ ಮಾಹಿತಿ.
5. ಬರುವ ಶೈಕ್ಷಣಿಕ ವರ್ಷಗಳ ಮುನ್ನೋಟದ ಅರಿವು.
6. ಭಾರತ ಮತ್ತು ವಿದೇಶಗಳ ಶೈಕ್ಷಣಿಕ ವಾತಾವರಣದ ತೌಲನಿಕ ಅಧ್ಯಯನ
7. ವಿವಿಧ ಕೋರ್ಸುಗಳಿಗೆ ದಾಖಲಾದವರ ವಿವರ
8. ಭಾರತದಲ್ಲಿ ಅಧ್ಯಯನ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳ ಪ್ರಮಾಣ

ಪ್ರಸಕ್ತ ಬಿಡುಗಡೆಯಾಗಿರುವ 2016-17 ನೇ ಸಾಲಿನ ವರದಿ ವಿವಿಧ ಮಾಹಿತಿಗಳನ್ನು ಒಳಗೊಂಡು ಹಲವಾರು ಆಯಾಮಗಳಲ್ಲಿ ಕುತೂಹಲಕಾರಿಯಾಗಿದೆ. ಇಂದು ಬಹುತೇಕ ಎಲ್ಲಾ ಪತ್ರಿಕೆಗಳಲ್ಲಿ ಪ್ರಮುಖ ಸುದ್ದಿಯಾಗಿ ವರದಿಯಾಗಿರುವಂತೆ‌ ಕರ್ನಾಟಕ ತನ್ನ ನೆರೆಯ ರಾಜ್ಯಗಳಿಗಿಂತ ಅದರಲ್ಲು ತಮಿಳುನಾಡಿಗಿಂತ ಭಾರಿ ಪ್ರಮಾಣದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದಿದೆ.

ಭಾರತದ ಒಟ್ಟು ವಯೋಮಾನದ ಯುವಜನತೆಯಲ್ಲಿ ಕೇವಲ ಶೇ 25.2 ಮಂದಿ ಯುವಜನತೆ ಉನ್ನತ ಶಿಕ್ಷಣಕ್ಕೆ ದಾಖಾಲಾಗುತ್ತಿದ್ದಾರೆ. ಕಳೆದ 2015-16 ನೇ ಸಾಲಿನಲ್ಲಿ ಇದು ಶೇ 24.5 ಇತ್ತು.
ಕರ್ನಾಟಕದಲ್ಲಿ ಶೇ 26.5 ರ ಪ್ರಮಾಣವಿದ್ದು ಕಳೆದ ಸಾಲಿಗಿಂತ (ಶೇ 26.1) ಅತ್ಯಲ್ಪ ಪ್ರಮಾಣ ಮಾತ್ರ ಏರಿಕೆ ಕಂಡು ಅಂಥ ಸಾಧನೆ ಸಾಧ್ಯವಾಗಿಲ್ಲ ಎನ್ನುವ ಚಿತ್ರಣ ನೀಡಿದೆ.
ಕರ್ನಾಟಕದ ಸ್ಥಿತಿ ಭಾರತದ ಸ್ಥಿತಿಗಿಂತ ತುಸು ಉತ್ತಮ ಎನಿಸಿದರೂ ನೆರೆಯ ರಾಜ್ಯಗಳಿಗಿಂತ‌ ಭಾರಿ ಹಿಂದುಳಿದಿದೆ. ತಮಿಳುನಾಡು ದೇಶದಲ್ಲೆ ಅತಿ ಹೆಚ್ಚಿನ GER (Gross Enrollment Ratio) ಹೊಂದಿದ್ದು ಶೇ 46.9 ರಷ್ಟು (ಕಳೆದ ಸಾಲಿನಲ್ಲಿ ಶೇ 44.3) ಯುವಜನತೆ ಉನ್ನತ ಶಿಕ್ಷಣ ಸಂಸ್ಥೆಗಳ ಮಟ್ಟಿಲು ಹತ್ತುತ್ತಾರೆ. ಉಳಿದ ನೆರೆಯ ರಾಜ್ಯಗಳ ಮತ್ತು ಕಳೆದ ಸಾಲಿನ ರಾಜ್ಯವಾರು  ಮಾಹಿತಿಗೆ ಚಿತ್ರಗಳನ್ನು ಗಮನಿಸಬಹುದು.




ಬಿಹಾರ ರಾಜ್ಯ 14.3 % ಚಿತ್ರಣ ಹೊಂದಿ ದೇಶದಲ್ಲೆ ಅತಿ ಕಡಿಮೆ GER ದಾಖಲಿಸಿರುವ ರಾಜ್ಯವಾಗಿ ಶೈಕ್ಷಣಿಕವಾಗಿಯೂ ತಾನು ಹಿಂದೆ ಇದ್ದೇನೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಗುರಿ ಮುಂದಿನ 2020 ಕ್ಕೆ ಶೇ 30 GER ಸಾಧಿಸಬೇಕೆನ್ನುವುದಾಗಿದೆ. ಏಕೆಂದರೆ ನೆರೆಯ ಚೀನಾ 2016 ರಲ್ಲಿ  ಶೇ 43.39 ಸಾಧಿಸಿದ್ದರೆ ಅಮೆರಿಕಾ ಶೇ 85.8 ಜಿ.ಇ.ಆರ್ ಸಾಧಿಸಿ ಮುಂಚೂಣಿಯಲ್ಲಿರುವ ದೇಶಗಳಲ್ಲೊಂದಾಗಿದೆ.

ಪ್ರಮುಖ ವಿಷಯ ಎಂದರೆ ದೇಶದ ಬಹುತೇಕ ಕ್ಷೇತ್ರಗಳ ಅಭಿವೃದ್ಧಿ ಶೈಕ್ಷಣಿಕ ಅದರಲ್ಲೂ ಉನ್ನತ ಶಿಕ್ಷಣ ಕ್ಷೇತ್ರದ ಪ್ರಗತಿಯ ಮೇಲೆಯೇ ಅವಲಂಬಿತವಾಗಿರುವುರಿಂದ ಆಡಳಿತ ಮತ್ತು ಶೈಕ್ಷಣಿಕ ವಲಯ ಸ್ವಲ್ಪ ಹೆಚ್ಚೆನಿಸುವಷ್ಟು ಇದರ ಪ್ರಗತಿಗೆ ಪ್ರಾಧಾನ್ಯತೆ ನೀಡಬೇಕಾದ ಅಗತ್ಯವಿದೆ.
ಅದರೊಟ್ಟಿಗೆ ಯುವಜನತೆ ಮತ್ತು ಅವರ ಪೋಷಕರು ಈ ಬಗ್ಗೆ ಹೆಚ್ಚಿನ ಅರಿವನ್ನು ಹೊಂದಬೇಕಾಗಿದ್ದು ಅವರಿಗೆ ಸೂಕ್ತ ಅರಿವು ಮೂಡಿಸುವ ಕೆಲಸವಾಗಬೇಕಾಗಿದೆ.  ಉನ್ನತ ಶಿಕ್ಷಣ ನೀಡುವ ಸಂಸ್ಥೆಗಳು ವಿದ್ಯಾದಾನವನ್ನು ವಾಣಿಜ್ಯಿಕರಣಗೊಳಿಸದೆ ಅದೊಂದು ಅಗತ್ಯ ಸೇವೆ ಎನ್ನುವ ರೀತಿಯಲ್ಲಿ ಪರಿಗಣಿಸಿದರೆ ಚೀನಾ ಅಥವಾ ಅಮೆರಿಕದ ಮಟ್ಟಿಗೆ ನಾವೂ ನಿಲ್ಲಬಹುದಾಗಿದೆ.

ಸಧ್ಯ ದೇಶದಲ್ಲಿ 864 ವಿಶ್ವವಿದ್ಯಾಲಯ ಗಳು ಮತ್ತು 40000 ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳು ಇದ್ದು
ಸರ್ಕಾರಗಳು ಈ ಬಗ್ಗೆ ಹೆಚ್ಚು ಒತ್ತು‌ ನೀಡುತ್ತಿವೆಯಾದರೂ ಅಗತ್ಯವಿರುವೆಡೆ ಉತ್ತಮ ಮೂಲಭೂತ ಸೌಕರ್ಯಗಳನ್ನೊಳಗೊಂಡ ಶೈಕ್ಷಣಿಕ ಸಂಸ್ಥೆಗಳನ್ನು ಪ್ರಾರಂಭಿಸಿ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ನೀಡಿದ್ದಲ್ಲಿ ದೇಶದ ಸರ್ವಾಂಗೀಣ ಪ್ರಗತಿಗೆ ನಾಂದಿ ಹಾಡಬಹುದಾಗಿದೆ.

ದಿನಾಂಕ:04.02.2018.             -ಪ್ರಸನ್ನಕುಮಾರ್ ಕೆರಗೋಡು

Wednesday, 31 January 2018

ನನ್ನ "ಅಣ್ಣನ ನೆನಪು"

                               ನನ್ನ "ಅಣ್ಣನ ನೆನಪು"

31 ನೇ ಜನವರಿ, 1998 ಬೆಳಿಗ್ಗೆ 10.00 ರ ಸಮಯ, ಮನೆಯ ಫೋನ್ ಬಡಬಡನೆ ಬಡಿದುಕೊಂಡಿತ್ತು. ರಿಸೀವರ್ ಕಿವಿಗಿಟ್ಟ ನನಗೆ "ನಿಮ್ಮ ತಂದೆಯನ್ನು ಮಂಡ್ಯದ ದೊಡ್ಡಾಸ್ಪತ್ರೆಗೆ ಅಡ್ಮಿಟ್ ಮಾಡಿದ್ದೇವೆ, ಬೇಗ ಬನ್ನಿ" ಎನ್ನುವ ಆತಂಕದ ಧ್ನನಿಯೊಂದು ಅಪ್ಪಳಿಸಿತ್ತು. ಅಲ್ಲೆ ಸಂಬಂಧಿಕರೊಬ್ಬರ ಆಟೊರಿಕ್ಷಾದಲ್ಲಿ ನನ್ನ ಅಕ್ಕನೊಡನೆ (ನಾನು ತಾಯಿಯನ್ನು ಹಾಗೆಂದು ಕರೆಯುತ್ತೇನೆ) ಗಾಬರಿಯಿಂದ ಆಸ್ಪತ್ರೆಗೆ ತೆರಳಿದರೆ ಅಲ್ಲಿ ಯಾವ ವಾರ್ಡುಗಳನ್ನು ತಡಕಾಡಿದರೂ ಅಣ್ಣ ಕಾಣದ ಕಾರಣ ಅವರು ಕೆಲಸ ಮಾಡುತಿದ್ದ ಸೂನಗಹಳ್ಳಿಯ ಸರ್ಕಾರಿ ಪ್ರೌಢಶಾಲೆ ಕಡೆ ಅದೆ ಆಟೊದಲ್ಲಿ ಇನ್ನೂ ಗಾಬರಿ, ಭಯ, ಆತಂಕದಲ್ಲೆ ರಸ್ತೆಯಲ್ಲಿ ಊರಬಳಿ ಹೋಗುವಾಗ 10.45 ರ ವೇಳೆಗೇ ಶಾಲಾಮಕ್ಕಳು ರಸ್ತೆಯಲ್ಲಿ ಗುಂಪುಗುಂಪಾಗಿ ದುಃಖಪೂರಿತವಾಗಿ ಆತಂಕದಿಂದ ಚರ್ಚಿಸುತ್ತಾ ನಡೆದು ಬರುತ್ತಿದ್ದನ್ನು ಗಮನಿಸಿದ ನನ್ನ ಮನಸ್ಸು ಕೆಟ್ಟದ್ದನ್ನು ಊಹಿಸಿಯೇ ಬಿಟ್ಟತ್ತು. ತಕ್ಷಣ ಆಟೊ ನಿಲ್ಲಿಸಿ ಭಯದ ಅಳುಕಿನಲ್ಲೆ ಇಷ್ಟು ಬೇಗ ಏಕೆ ಶಾಲೆ ಬಿಟ್ಟಿತು ಎಂದು ಕೇಳಿದೆ. "ನಮ್ ಸ್ಕೂಲ್ನ ಮಾಯಿಗಯ್ಯ ಮೇಷ್ಟ್ರು ಸತ್ತೋದ್ರು" ಎನ್ನುವ ಬರಸಿಡಿಲನ ಸುದ್ದಿಯನ್ನು ಎದೆಗೆ ಇರಿದರು. ಮುಂದಿನ 15-20 ನಿಮಿಷದ ನಡು ರಸ್ತೆಯಲ್ಲಿನ  ಅಕ್ಕನ-ನನ್ನ ಗೋಳು ಅರಣ್ಯರೋದನವಾಗಿತ್ತು.

ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಪ್ರಥಮ ವರ್ಷದ ಎಂ.ಎ ಅಧ್ಯಯನ ಮಾಡುತ್ತಿದ್ದ ನಾನು ವಾರಾಂತ್ಯ ರಜೆಗೆಂದು 30 ರ ಶುಕ್ರವಾರ ಸಂಜೆ ಊರಿಗೆ ತೆರಳಿದ್ದೆ.  ಅದೇ ತಾನೆ ಕೆಲಸದಿಂದ ಹಿಂದಿರುಗಿದ್ದ ಅಣ್ಣನೊಡನೆ ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿತಿದ್ದೆ. ರಾತ್ರಿ ಮೀನಿನ ಸಾರಿನ ಊಟ ಮಾಡುವಾಗ ಇದ್ದಕ್ಕಿದ್ದಂತೆ ಅಣ್ಣ ಎದೆಯಲ್ಲಿ ಸಂಕಟ ಎಂದು ಹೇಳಿ ಕೆಲಹೊತ್ತಿನ ನಂತರ ಎದೆ ನೋವು ಎಂದು ಗ್ಯಾಸ್ಟ್ರಿಕ್‌ ಸಮಸ್ಯೆಗೆ ಟ್ಯಾಬ್ಲೆಟ್‌ ತಗೊಂಡು ನೀರು ಕುಡಿದು ಮಲಗಿದರು. ಬೆಳಿಗ್ಗೆ ಎಂದಿನಂತೆ ಬೆಳಗಿನ ತರಗತಿ ಎಂದು 7 ಗಂಟೆಗೆ‌ ಮನೆ ಬಿಟ್ಟವರು ವಾಪಸ್ಸು ಮಧ್ಯಾಹ್ನ12 ಗಂಟೆಗೆ ಮನೆಗೆ ಬಂದಿದ್ದು ಹೆಣವಾಗಿ !!!

ಇಂದಿಗೆ ನಾನು ನನ್ನ ಅಣ್ಣನನ್ನು ಕಳೆದುಕೊಂಡು 20 ವರ್ಷ!  ಇದನ್ನು ಬರೆಯುತ್ತಿರುವ ಈ ಹೊತ್ತಿನಲ್ಲೂ ನನ್ನ ಅವರೊಡನಿನ 23 ವರ್ಷ, 11 ತಿಂಗಳು 12 ದಿನಗಳ ಅವಿನಾಭಾವ ಸಾಂಗತ್ಯದ ನೆನಪುಗಳನ್ನು ನೆನದು  ಕಣ್ಣಾಲಿಗಳು ತೇವವಾಗುತ್ತಿವೆ !

ನನ್ನ ಅಣ್ಣ ಯಾವುದೆ ದೊಡ್ಡ ಹುದ್ದೆಯಲ್ಲಿರಲಿಲ್ಲ. ಯಾವ ಮಹಾನ್ ವ್ಯಕ್ತಿಯೂ ಆಗಿರಲಿಲ್ಲ. ಶಿಕ್ಷಣ ಇಲಾಖೆಯಲ್ಲಿ ಸಾಮಾನ್ಯ ಗುಮಾಸ್ತರಾಗಿದ್ದವರು.
But he was very good Human Being and a responsible father.
ನನ್ನೊಳಗೆ ಮಾನವೀಯ ಮೌಲ್ಯಗಳ ಬೀಜ ಬಿತ್ತಿದವರು. ಸ್ವಾಭಿಮಾನದ ಗಿಡ ನೆಟ್ಟವರು. ಅಸಾಧಾರಣವಾದುದನ್ನು ಸಾಧಿಸುವ ಛಲ ತುಂಬಿದವರು. ನೊಂದವರ ಕಣ್ಣೀರು ಒರೆಸುವ ದೀಕ್ಷೆ ಕೊಟ್ಟವರು. ಅನ್ಯಾಯ ಕಂಡಾಗ ಸಿಡಿದೇಳುವ ಶಕ್ತಿ ತುಂಬಿದವರು. ಎಲ್ಲಕ್ಕಿಂತ ಅರ್ಥಪೂರ್ಣವಾಗಿ ಬದುಕುವ ಮಹಾಪಾಠ ಕಲಿಸಿಕೊಟ್ಟವರು.

ಸಧ್ಯದ ನನ್ನ ಪ್ರತಿ ಕ್ಷಣದ ಕ್ರಿಯೆಗೆ ಅವರ ಪ್ರತಿಕ್ರಿಯೆ ಹೀಗೆ ಇರುತ್ತಿತ್ತೋ ಏನೊ ಎಂದು ಭಾವಿಸುವಷ್ಟು ಅಥವಾ ಭ್ರಮಿಸುವಷ್ಟು ಅವರು ನನ್ನನ್ನು ಆವರಿಸಿಕೊಂಡಿದ್ದಾರೆ. ಅವರೊಡನಿನ ನೆನಪಿರುವ ಅಷ್ಟೂ ಕಾಲವೂ ಒಂದು ಪಾಠವಾಗಿತ್ತು ಅಥವಾ ಅದೊಂದು ನನ್ನ ಕಲಿಕಾ ಪ್ರಯೋಗಶಾಲೆಯಾಗಿತ್ತು.

ಅದು ನಾನು ಎರಡನೆ ತರಗತಿಯಲ್ಲಿ ಇದ್ದ ಸಮಯ. ಅವರ ಜೇಬಿನಿಂದ ಎರಡು ರೂಪಾಯಿ ಕದ್ದು ನನ್ನಿಷ್ಟದ ಬಿಸ್ಕೆಟ್ ತಿನ್ನುವಾಗ ಸಿಕ್ಕಿಕೊಂಡಿದ್ದು, ದನಕ್ಕೆ ಬಡಿದ ಹಾಗೆ ಅವರಿಂದ ಬಡಿಸಿಕೊಂಡ ನೆನಪು ಈಗಲೂ ಇದೆ. ಸಂಜೆ ಮನೆಗೆ ಬರುವಾಗ ಅದೆ ಬಿಸ್ಕೆಟ್ ತಂದು ನನ್ನ ಮಂದಿಟ್ಟು ನಿನಗೆ ಬೇಕಾದ್ದು ಸಿಕ್ಕೆ ಸಿಗುತ್ತದೆ, ಸ್ವಲ್ಪ ತಡವಾಗುತ್ತದೆ, ತಾಳ್ಮೆ ವಹಿಸು ಎಂದು ಆಗ ಹೇಳಿದ ಅವರ ಮಾತು ಈಗಲೂ ನನ್ನ ಬದುಕಿನಲ್ಲಿ ಹಾಸುಹೊಕ್ಕಾಗಿದೆ.

ಹತ್ತು ವರ್ಷಗಳ ಹಿಂದೆ ಈ ಬಗ್ಗೆ ಬರೆದ "ಅಣ್ಣ, ಬಿಸ್ಕಟ್ ಮತ್ತು ನಾನು" ಎನ್ನುವ ಕವಿತೆಯ ಕೊನೆಯ ಎರಡು ಸಾಲು ಈಗಲೂ ಕಾಡುತ್ತವೆ.
"ಹಳೆಯ ಅಲ್ಮೆರಾದಲ್ಲಿ ಅಣ್ಣನ ಹೆಗಲ ಮಾಸಲು ಬ್ಯಾಗು,
ಅದರ ಬಿಸ್ಕೆಟ್ಟಿನ ವಾಸನೆ ದಟ್ಟವಾಗಿದೆ"

ನಮ್ಮ ಊರಿನ ಸಮೀಪದಲ್ಲಿ ಹರಿಯುವ ದೊಡ್ಡ ಕಾಲುವೆಯಲ್ಲಿ ಪ್ರತಿ ಭಾನುವಾರ ಈಜುವ ಖಯಾಲಿ ನನ್ನದು. ನನ್ನ ಸುರಕ್ಷತೆಯ ಬಗ್ಗೆ ಸದಾ ಗಾಬರಿಯಾಗುತ್ತಿದ್ದ ಅಣ್ಣ ಅದೆಷ್ಟೊ ಬಾರಿ ಈಜಲು ಹೋಗಕೂಡದೆಂದು ಕಟ್ಟಪ್ಪಣೆ ಮಾಡಿದ್ದರೂ ನನ್ನ ಗೆಳೆಯರ ಬಳಿ ನಾನು ಚೆನ್ನಾಗಿ ಈಜುವುದನ್ನು ಕೇಳಿ ತಿಳಿದು ನನಗೆ ಪ್ರೋತ್ಸಾಹಿಸಿದ ದಿನಗಳು ಮೆರೆಯಲು ಸಾಧ್ಯವಿಲ್ಲ.

ಪ್ರಾಥಮಿಕ ಶಾಲಾ ಹಂತದಲ್ಲಿ ಎಮ್ಮೆ ಮೇಯಿಸುವುದು ನನ್ನ ಅಚ್ಚುಮೆಚ್ಚಿನ ಕೆಲಸವಾಗಿದ್ದನ್ನು ಕಂಡು ಎಲ್ಲಿ ಇದರಲ್ಲೆ ಉಳಿದುಬಿಡುವನೊ ಎಂದು ಅದನ್ನು ಮಾರಿದ್ದು ಅವರು ನನ್ನ ಬಗ್ಗೆ ಕಂಡ ಕನಸು ಎಷ್ಟೊಂದು ಉನ್ನತವಾಗಿತ್ತು ಎಂಬುದನ್ನು ನಿರೂಪಿಸುತ್ತದೆ. ಎಷ್ಟೊ ಬಾರಿ ಅದೆ ನನಗೆ driving force ಆಗಿ ಈಗಲೂ ಶಕ್ತಿ ತುಂಬುತ್ತದೆ.

ಒಂಬತ್ತು ಜನರ ದೊಡ್ಡ ಕುಟಂಬ ನಿಭಾಯಿಸಲು ಇದ್ದ ಸಣ್ಣ‌ ನೌಕರಿಯಲ್ಲಿನ ಆದಾಯ ಸಾಲದೆಂದು ನಮ್ಮದೆ ಎಂದು ಇದ್ದ ತುಂಡು ಗದ್ದೆಯಲ್ಲಿ ವ್ಯವಸಾಯ ಮಾಡುತ್ತಿದ್ದ, ರಾತ್ರಿಯ ವೇಳೆ ಗದ್ದೆಗೆ ನೀರು ಹಾಯಿಸಲು ತೆರಳುತ್ತಿದ್ದ ಅಣ್ಣನಿಗೆ ನಾನೂ ಬರುವೆ ಎಂದರೆ ಈ ಕಷ್ಟದ ಜೀವನ ನನಗೆ ಸಾಕು ಎಂದು ಹೇಳಿ ಒಬ್ಬರೆ ತೆರಳುತ್ತಿದ್ದನ್ನು ನೆನದರೆ ಕರುಳು ಕಿವುಚಿದಂತಾಗುತ್ತದೆ.

ಈ ಸಂಭಾಷಣೆಯ ನೆನಪಿನ್ನೂ ಹಸಿರಾಗಿದೆ.
ದೆಹಲಿಯ ಜವಹರಲಾಲ್ ವಿಶ್ವವಿದ್ಯಾನಿಲಯದಲ್ಲಿ ಸೀಟು ಸಿಕ್ಕುತ್ತದೆ ಎಂದು‌ ನಾನಂದೆ.
ಅಲ್ಲಿ ಏನು ಓದುವುದು ? ಅಣ್ಣ ಕೇಳಿದರು.
ಎಂ.ಎ ಇಂಗ್ಲಿಷ್, ಅಂದೆ ನಾನು.
ಮೈಸೂರಿನಲ್ಲಿ ಏನು ಓದುವುದು, ಅವರು ಕೇಳಿದರು.
ಎಂ.ಎ ಇಂಗ್ಲಿಷ್, ಎಂದು ಉತ್ತರಿಸಿದೆ ನಾನು.
ಇಲ್ಲೂ ಅದೆ ಅಲ್ಲವೆ ಓದುವುದು, ಇಲ್ಲಿಯೆ ಸೇರು. ಅಣ್ಣ ಎಂದರು. ನಾನು ಮೌನಿಯಾದೆ.
ಅವರು ಸತ್ತಾಗ ನನಗನ್ನಿಸಿತು-ಪ್ರಾಯಶಃ ಇನ್ನು ಐದು ತಿಂಗಳಲ್ಲಿ ಅವರು ಇಲ್ಲವಾಗುತ್ತಾರೆ ಎಂದು ಅವರಿಗೆ ಅನ್ನಿಸಿದ್ದಿರಬೇಕು- ಎಂದು.

ಈಗಲೂ ನೆನಪಿದೆ.
ಅಣ್ಣನ ಮರಣದ ನಂತರದ ನನ್ನ ದೈನೇಸಿ ಬದುಕಿನ ಆಟ. ಎಂ.ಎ ಯನ್ನು ಅರ್ಧಕ್ಕೆ ಬಿಟ್ಟದ್ದು, ಮತ್ತೆ ಮಾರನೆಯ ವರ್ಷ ಎರಡೂ ವರ್ಷಗಳ ಪರೀಕ್ಷೆಯನ್ನು ಕಟ್ಟಿ ಪಾಸು ಮಾಡಿಕೊಂಡದ್ದು, ಮಂಡ್ಯದ ಕಾನೂನು ಕಾಲೇಜಲ್ಲಿ ಉಪನ್ಯಾಸಕನಾಗಿ ಒಂದೇ ದಿನ ಕೆಲಸ ಮಾಡಿ ಬಿಟ್ಟದ್ದು, ಪತ್ರಿಕೆಯೊಂದರಲ್ಲಿ ಪತ್ರಕರ್ತನಾಗಿ ಸೇರಿ ಒಂದೇ ತಿಂಗಳಿಗೆ ಅದನ್ನೂ ಬಿಟ್ಟಿದ್ದು, ಬೆಂಗಳೂರಿನ ಸಿಟಿ ಬ್ಯಾಂಕಿನಲ್ಲಿ ಕೆಲಸ ದಕ್ಕಿಸಿಕೊಂಡು ಕೆಲವೇ ದಿನಕ್ಕೆ ಅದಕ್ಕೂ ವಿದಾಯ  ಹೇಳಿದ್ದು,, ಎಲ್ಲಾದರೂ ಸೇಲ್ಸ್ ಬಾಯ್ ಆಗಿ ಕೆಲಸ ಮಾಡಲು ಸಿದ್ದವಿದ್ದದ್ದು, ಸಾಹಿತ್ಯದಲ್ಲಿ ಸಂಶೋಧನೆ ಮಾಡಲು ವಿದೇಶಿ ವಿಶ್ವವಿದ್ಯಾಲಯದ ಅವಕಾಶವನ್ನು ದೂಡಿದ್ದು,  ದೊಡ್ಡ ಕುಟುಂಬದ ಹೊರೆ ಹೊರಲು ಏನೆಲ್ಲಾ ಆಟ. ಅಂತಿಮವಾಗಿ ಇಂಗ್ಲಿಷ್ ಎಂ.ಎ ಮಾಡಿದ್ದೇನೆ ಎನ್ನುವ ಅಹಂ ಬಿಸಾಡಿ ಅನುಕಂಪದ ಹುದ್ದೆಗೆ ಕೊನೆಯ ದಿನಗಳಲ್ಲಿ ಅರ್ಜಿ ಸಲ್ಲಿಸಿದ್ದು.. ಶಿಕ್ಷಣ ಇಲಾಖೆಯ ಡಯಟ್ ಮಂಡ್ಯದಲ್ಲಿ ಕೆಲಸಕ್ಕೆ ಸೇರಿದ್ದು..
ಅಬ್ಬಾ..!!

ಧುತ್ತನೆ ಬಂದರೆಗುವ ಸಾವು ಏನೆಲ್ಲಾ ಎಷ್ಟೆಲ್ಲಾ ಧಾವಂತಗಳನ್ನು ಸೃಷ್ಟಿಸಿಬಿಡುತ್ತದೆ. ಅದೆಷ್ಟೊ ಯುವಕ-ಯುವತಿಯರ ಬದುಕಿನಲ್ಲಿ‌ ಹೀಗೆ ಆಗಿರುತ್ತದೆ. ಇದೊಂದು ಚಕ್ರ‌ ಅಚಾಮಕ್‌ ಆಗಬಹುದು ಕೂಡ. ಸಂಗಾತಿ ಮತ್ತು ಮಕ್ಕಳಿಗೆ ಹೊರಜಗತ್ತಿನ ಪರಿಚಯ ಮಾಡಿಕೊಡದೆ ಹೋದರೆ ಇಂತಹ ಸಂದರ್ಭವನ್ನು ಮಾತ್ರವಲ್ಲದೆ ಭವಿಷ್ಯವನ್ನೂ ನಿಭಾಯಿಸುವುದು ಕಷ್ಟವಾಗುತ್ತದೆ. ನನ್ನ ಸುತ್ತಮುತ್ತಾ ಹೀಗೆ ಆದಾಗ ನನ್ನ ಅಗತ್ಯ ಕಂಡಲ್ಲಿ ನಾನು ಕೂಡಲೆ ಧಾವಿಸುತ್ತೇನೆ ಒಂದಷ್ಟು ಧೈರ್ಯ ತುಂಬಲು. 

ಇದೆಲ್ಲದರ‌ ನಡುವೆ ಅಣ್ಣ ಸತ್ತು ಇಪ್ಪತ್ತಾಯಿತು ಎಂದೆನಿಸುವುದೇ ಇಲ್ಲ. ಇಲ್ಲೆ ಎಲ್ಲೊ ಪಕ್ಕ ನಿಂತು ನನ್ನನ್ನು ನಿರ್ದೇಶಿಸುತ್ತಿದ್ದಾರೆ ಎನಿಸುತ್ತದೆ. ನನ್ನ ಪ್ರತಿ ಸರಿ ಹೆಜ್ಜೆಯ ಜೊತೆಗಿದ್ದಾರೆ ಹಾಗೂ ಪ್ರತಿ ತಪ್ಪು ಹೆಜ್ಜೆಯಲ್ಲೂ ಎಚ್ಚರಿಸುತ್ತಾರೆ ಅನ್ನಿಸುತ್ತದೆ.

ಕನಸುಗಳು ಸಾಕಷ್ಟಿವೆ. ಕನಸುಗಾರ ನಾನು. ಅನುಷ್ಟಾನಿಸದೆ ಅಲ್ಲೆ ನಿಲ್ಲಲೊಲ್ಲದು ನನ್ನ ಮನಸ್ಸು‌. ಬದುಕುತ್ತೇನೆ, ಅತ್ಯಂತ ಅರ್ಥಪೂರ್ಣವಾಗಿ ನನ್ನ "ಅಣ್ಣನ ನೆನಪಿನಲ್ಲಿ..."

  31.01.2018.                         -ಪ್ರಸನ್ನಕುಮಾರ್ ಕೆರಗೋಡು

Thursday, 11 January 2018

ರಾಷ್ಟ್ರೀಯ ಯುವ ದಿನ: ಚಿಂತನೆ ಮಾಡಲು ಕಲಿಯೋಣ

ರಾಷ್ಟ್ರೀಯ ಯುವ ದಿನ: ಚಿಂತನೆ ಮಾಡಲು ಕಲಿಯೋಣ

 "ಈ ಜಗತ್ತೆನ್ನುವುದು ನಮ್ಮನ್ನು ನಾವು ಗಟ್ಟಿಗೊಳಿಸಲೆಂದೇ ಇರುವ ವ್ಯಾಯಾಮ ಶಾಲೆ"

ಸ್ವಾಮಿ ವಿವೇಕಾನಂದರ ಈ
ಮೇಲಿನ ಒಂದು ಮಾತನ್ನಷ್ಟೆ ಬದುಕಿಗೆ ಉದಾಹರಣೆಯನ್ನಾಗಿ ಪರಿಗಣಿಸಿಬಿಟ್ಟರೆ ಸಾಕು, ಜಗತ್ತು ಏನು ? ನಾನು ಯಾರು ? ನನ್ನ ಬದುಕಿನ ಉದ್ದೇಶ ಏನು ? ನಾನು ಯಾಕೆ, ಹೇಗೆ ಗಟ್ಟಿಗೊಳ್ಳಬೇಕು ? ಅದರಿಂದಾಗುವ ಲಾಭವಾದರೂ ಏನು ? ಎನ್ನುವ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಬಿಡುತ್ತದೆ. ಇಂತಹ ನೂರು-ಸಾವಿರ ಪ್ರಶ್ನೆಗಳನ್ನು ಹುಟ್ಟುಹಾಕುವ ವಿವೇಕಾನಂದರ ನುಡಿಗಳು ದಾರಿದೀಪಗಳಾಗುವಲ್ಲಿ ಸಂಶಯ ಕಾಣದು.

೧೯೮೫ ರಿಂದ ಆಚರಿಸಲ್ಪಡುತ್ತಿರುವ
ರಾಷ್ಟ್ರೀಯ ಯುವ ದಿನ ಮತ್ತು ರಾಷ್ಟ್ರೀಯ ಯುವ ಸಪ್ತಾಹ ಆಚರಣೆ ಮಾಡುತ್ತಿರುವ, ಹಾಗೆಯೇ ಯುವಜನತೆ ಗೊಂದಲದ ತಲ್ಲಣಗಳನ್ನು ಹೊತ್ತು ನಿಂತಿರುವ  ಈ ಹೊತ್ತಿನಲ್ಲಿ ಇಂತಹ ಅದೆಷ್ಟೋ ಮಾತುಗಳು ಪ್ರಸ್ತುತವಾಗುತ್ತವೆ.

ಯುವಮನಸ್ಸುಗಳ ಸ್ಪೂರ್ತಿಯ ಸಾಕ್ಷಿ ಮತ್ತು ಸಂಕೇತವಾಗಿರುವ ವಿವೇಕಾನಂದರ ಜನ್ಮದಿನದಂದು ಪ್ರಾಯಶಃ ಎಲ್ಲ ಭಾರತೀಯ  ಯುವಮನಸ್ಸುಗಳು ತಮ್ಮ ತಮ್ಮ ಜಗತ್ತಿನಲ್ಲಿ ವ್ಯಾಯಾಮದ ಕಸರತ್ತನ್ನು ಮಾಡಲೆಬೇಕಾಗಿದೆ.

ಈ ಸಂದರ್ಭದಲ್ಲಿ ಸಧ್ಯದ ಯುವಕ-ಯುವತಿಯರು ಮಾಡಬೇಕಾದ್ದು ಏನು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುವುದು ಸಹಜ. ಅದೆಷ್ಟೊ ಮಂದಿ ದೇಶಕಟ್ಟುವ ಕೆಲಸದಲ್ಲಿ ನಮ್ಮ ಪಾತ್ರ ಏನು ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವಲ್ಲೆ ಯೌವ್ವನ ದಾಟಿಬಿಟ್ಟಿರುತ್ತಾರೆ.

ಸಧ್ಯ ಯುವಕರ ಆದ್ಯತೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಹಿರಿಯರು ಅವರನ್ನು ಗುಮಾನಿಯಿಂದಲೆ ನೋಡುವ ಪ್ರಯತ್ನ ಮಾಡುತ್ತಾರೆ. ಈ ತರಹದ ಅದೆಷ್ಟೊ ಅನುಭವಗಳು ನನಗೂ ಆಗಿವೆ. ಕೆಲವು ಹಿರಿಯರ ಪ್ರಕಾರ ಯುವಜನತೆ ಬೇಜವಾಬ್ದಾರರು ಮತ್ತು ದೇಶ ಕಟ್ಟುವ ವಿಷಯದಲ್ಲಿ ಇವರಿಗೆ ಆಸಕ್ತಿಯಿಲ್ಲ ಎನ್ನುವುದೇ ಆಗಿದೆ.
ಆದರೆ ವಿಷಯ ಇದಾವುದೂ ಅಲ್ಲ. ಅಥವಾ ಅದು ಇದ್ದರೂ ಹಿರಿಯರು ಅಂದುಕೊಂಡಿರುವಷ್ಟು ಗಂಭೀರವೂ ಆಗಿಲ್ಲ.
ಒಂದಂತೂ ಕೊರತೆಯಿದೆ ಇವರಲ್ಲಿ. ಅದು ಆಲೋಚನಾ ಶಕ್ತಿಯ ಕೊರತೆ.  ಅದೆಷ್ಟೊ ಯುವ ಪ್ರೇರಣಾ ಶಿಬಿರಗಳಲ್ಲಿ ಇವರೊಡನೆ ಸಂವಾದಿಸುವಾಗ ಇದು ತಿಳಿದುಬರುತ್ತದೆ. ಬುದ್ಧನ ಮತ್ತು ಹಲವು ದಾರ್ಶನಿಕರ ಪ್ರಕಾರ ಮನುಷ್ಯನ ಭವಿಷ್ಯದ ಎಲ್ಲ ಅಂಶಗಳೂ ಅವನ ಆಲೋಚನೆಯ ಮೇಲೆಯೇ ನಿಂತಿದೆ. ಅಂದಮೇಲೆ ಆಲೋಚನೆ ಯಾವುದೆ ವ್ಯಕ್ತಿಯ ಏಳಿಗೆಗೆ ಬಹುಮುಖ್ಯ ಅಂಶ ಎನ್ನುವುದು ತಿಳಿಯುತ್ತದೆ. ಇದರ ನಂತರ ಏಕಾಗ್ರತೆ, ಕೆಲಸ ಮಾಡುವ ಮನಸ್ಸು, ಕಾರ್ಯಪ್ರವೃತ್ತತೆ ತತ್ಪರಿಣಾಮವಾಗಿ ಉಂಟಾಗುತ್ತವೆ.

ವಿವೇಕಾನಂದರು ಒಮ್ಮೆ ಹೀಗೆ ಹೇಳುತ್ತಾರೆ.
"ನೀವು ಯಾವುದೇ ಕೆಲಸವನ್ನು ಮಾಡುವಾಗಲೂ ನಿಮ್ಮ ಮನಸ್ಸು ಹೃದಯ, ನಿಮ್ಮ ಸರ್ವಸ್ವವನ್ನೂ ಆ ಕೆಲಸಕ್ಕೆ ಕೊಡಿ. ನಾನೊಮ್ಮೆ ಒಬ್ಬ ಸಾಧು ಮಹಾತ್ಮನನ್ನು ನೋಡಿದ್ದೆ. ಆತ ಪೂಜೆ, ಧ್ಯಾನಗಳನ್ನು ಎಷ್ಟು ಏಕಾಗ್ರತೆ ಶ್ರದ್ಧೆಗಳಿಂದ ಮಾಡುತ್ತಿದ್ದನೋ ಅಷ್ಟೇ ಸಾವಧಾನದಿಂದ ತನ್ನ ಆಡುಗೆ ಮಾಡುವ ಹಿತ್ತಾಳೆ ಪಾತ್ರೆಗಳನ್ನು ಫಳ ಫಳನೆಹೊಳೆಯುವ ಚಿನ್ನದಂತೆ ತೊಳೆದಿಡುತ್ತಿದ್ದನು"

ಎಲ್ಲವೂ ಮನಸ್ಸು ಮತ್ತು ಅದು ಆಲೋಚಿಸುವ ವಿಷಯದ ಮೇಲೆ ಅವಲಂಭಿತವಾಗಿದೆ ಎಂದ ಮೇಲೆ ಯುವಜನರು ಯೋಚಿಸುವುದನ್ನು ಕಲಿತು ರೂಡಿಸಿಕೊಳ್ಳಬೇಕಿದೆ. ಮತ್ತು ಹೆತ್ತವರು, ಶಾಲಾಕಾಲೇಜುಗಳು, ಶಿಕ್ಣಕರು ಮತ್ತು ಹಿರಿಯರು ಇದನ್ನೇ ಬೋದಿಸಬೇಕಿದೆ.

ಈ ಅಲೋಚನೆ ಅಥವಾ ಚಿಂತನೆ ಯುವಜನರಲ್ಲಿ ಕನಸುಗಳನ್ನು ಹುಟ್ಟುಹಾಕುತ್ತದೆ. ಅದು ಭವಿಷ್ಯದ ಯೋಜನೆ ರೂಪಿಸಿ ಅಗತ್ಯವಿರುವ ಏಕಾಗ್ರತೆಯನ್ನು ಉಂಟುಮಾಡಿ ಕಾರ್ಯಪ್ರವೃತ್ತರಾಗಲು ಪ್ರೇರೇಪಿಸುತ್ತದೆ. ಅದು ಸ್ವನಿರ್ಮಾಣದ ಬುನಾದಿ ಹಾಕಿಕೊಂಡು ಕುಟುಂಬ- ತನ್ನವರು ಎಂದು‌ ಮುಂದುವರೆದು ನಂತರ ಸಮಾಜ ಆ ಮೂಲಕ ವಿವೇಕಾನಂದರು ಕನಸಿದ ರಾಷ್ಟ್ರ ನಿರ್ಮಾಣದ ಬಹುದೊಡ್ಡ ಕಾರ್ಯದಲ್ಲಿ ನಿರತರಾಗುವೆಡೆ ಮನಸ್ಸನ್ನು ಕೇಂದ್ರೀಕರಿಸುತ್ತದೆ. ಪ್ರಸ್ತುತದ ಯುವಜನತೆಯಲ್ಲಿ ಹಾಗಾಗುವ ಕಾರ್ಯ ಬಹಳ ಕಠಿಣ ಎನಿಸದರೂ ಕಷ್ಟವೇನಾಗಲಾರದು.

ಕೊನಗೂ ನನಗೆ ನೆನಪಾಗುವುದು ವಿವೇಕಾನಂದರ ಸ್ಫೂರ್ತಿಯ ಈ ಮಾತೆ
"ಎದ್ದೇಳಿ, ಚಿಂತಿಸಿ, ಕಾರ್ಯೋನ್ಮುಕರಾಗಿ, ಈ ಬದುಕಾದರು ಎಷ್ಟು ದಿನ, ಮಾನವರಾಗಿ ಹುಟ್ಟಿದಮೇಲೆ ಏನಾದರು ಸಾಧಿಸಿ"

ರಾಷ್ಟ್ರೀಯ ಯುವದಿನದ ಶುಭಾಶಯಗಳೊಂದಿಗೆ....

                                                -ಪ್ರಸನ್ನಕುಮಾರ್ ಕೆರಗೋಡು

Saturday, 9 December 2017

ಎಲ್ಲರಿಗೂ ನಮಸ್ಕಾರ.

"ಕ್ರಿಯಾ" ದಲ್ಲಿ ಮೊದಲು ಏನನ್ನು ಬರೆಯಲಿ ? ಯಾವುದರ ಬಗ್ಗೆ ಬರೆಯಲಿ ? ಕನ್ನಡದಲ್ಲೊ ? ಇಂಗ್ಲಿಷಿನಲ್ಲೊ ? ಯಾರನ್ನು ಉದ್ದೇಶಿಸಿ ಬರೆಯಲಿ ಎನ್ನುವ ತಾಕಲಾಟದಲ್ಲೆ ನನ್ನ ಅತ್ಯಾಪ್ತರಾದ ಯುವಕರ ಬಗ್ಗೆಯೆ...ಅವರ ಮನೋ-ತುಮುಲಗಳ ಬಗ್ಗೆಯೆ..ನನ್ನ ಭಾಷೆ ಕನ್ನಡದಲ್ಲೆ...(ಪಾಠ ಮಾಡುವ ಇಂಗ್ಲಿಷಿನಲ್ಲಲ್ಲ)
ಅವರನ್ನು ಉದ್ದೇಶಿಸಿಯೇ ಬರೆ ಎಂದು ಮನಸ್ಸು ಹೇಳಿತು.

ಯಾರು ಈ ಯುವಕರು..? (ಯುವತಿಯರನ್ನೂ ಉದ್ದೇಶಿಸಿಯೆ)
ಏನು-ಎತ್ತ ಅವರ ಮನಸ್ಸು-ದೇಹಗಳು..?
ಅದೇನು..ಈ ಯೌವ್ವನ..?
ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹದಿನೆಂಟು ವರ್ಷಗಳಿಂದ ಹೆಣಗಾಡಿದ್ದೇನೆ..ಉತ್ತರ ಸಿಕ್ಕುವುದಿರಲಿ..?
ಒಂದಿದ್ದ ಒಂದು ಪ್ರಶ್ನೆ ಇಂದು ರಾಶಿ ರೂಪದಲ್ಲಿದೆ.

ಉತ್ತರ ಹುಡುಕುವುದನ್ನು ನಿಲ್ಲಿಸಿದ್ದೇನೆ.
ಏಕೆಂದರೆ ಅದು ಸಿಕ್ಕದಿದ್ದರೂ "ನಾನೆ" ಕಂಡುಕೊಂಡಿದ್ದೇನೆ.
ಅದು..ಯುವಕರು ಅಂದರೆ, ಯುವತಿಯರು ಅಂದರೆ ಮತ್ತು ಯೌವ್ವನ ಅಂದರೆ.,
"ಶಕ್ತಿ" .."ಶಕ್ತಿ".."ಶಕ್ತಿ" ಹೌದು ಅದೊಂದು ಅದಮ್ಯ.

ಆ ಶಕ್ತಿಯ ಬಳಕೆ ಹೇಗೆ.? ಎಲ್ಲಿ.?  ಈ ಶಕ್ತಿಮಾನರನ್ನು ಮತ್ತು  ಅವರ ಶಕ್ತಿಯನ್ನು  ಬಳಸಿಕೊಳ್ಳುವುದು ಹೇಗೆ.?
ಮತ್ತಷ್ಟು ಪ್ರಶ್ನೆಗಳು..ಮತ್ತೆ ಉತ್ತರಗಳಿಗಾಗಿ ತಡಕಾಟ.

"Youths are not Useless, Youths are Used less"
"ಯುವಕರು ಅನುಪಯುಕ್ತರಲ್ಲ...ಅವರನ್ನು ಕಡಿಮೆ ಉಪಯುಕ್ತರನ್ನಾಗಿಸಲಾಗಿದೆ" ಎನ್ನುವ ಮಾತನ್ನು ಉದಾಹರಿಸಿಕೊಂಡೇ ಈ ವಿಷಯದ ಬಗ್ಗೆ ಮಾತಿಗಿಳಿಯುವುದಾದರೆ ಎಲ್ಲೊ ಅಲ್ಲಿ ಸತ್ಯ ಕಾಣುತ್ತವೆ. ಯೌವ್ವನಿಗರನ್ನು ಸದಾ ಅನುಮಾನಿಸುವ ಹಿರಿಯರ ಒಂದು ಪಡೆಯೆ ಇದೆ ಎಂದು ಆರೋಪಿಸುವ ಯುವಕರ ಒಂದು ದಂಡೇ ಇದೆ. ಈ ಮಾತನ್ನು ಒಪ್ಪುವುದು ಮತ್ತು ಬಿಡುವುದು ಇಲ್ಲಿ ಅಪ್ರಸ್ತುತ.

ಪ್ರಸ್ತುತವಾದದ್ದೆಂದರೆ ಅವರಿಗೆ ಅಗತ್ಯವಿರುವ ಮಾರ್ಗದರ್ಶನ, ಅವಕಾಶ ಮತ್ತು ಮುಖ್ಯವಾಗಿ ಪ್ರೀತಿ ನಿಜವಾಗಿಯೂ ದೊರಕುತ್ತಿದೆಯೆ ಎಂಬುದು. ಇದೆಲ್ಲೆವೂ ಸಿಕ್ಕಿದೆ ಎನ್ನುವುದಾದರೆ ಯಾಕೆ ಕೆಲವು ಯುವಕರು ದಾರಿ ತಪ್ಪಿದ್ದಾರೆ ಅಥವಾ
ತಪ್ಪುತ್ತಿದ್ದಾರೆ ?

ಸಿಕ್ಕೇ ಇಲ್ಲ ಎನ್ನುವುದಾದರೆ ಹಲವು ಯುವಕರು ಸಂಸಾರದ ನೊಗವನ್ನೂ ಹೊತ್ತು  ರಾಷ್ಟಕಟ್ಟುವ ಮಹತ್ಕಾರ್ಯದಲ್ಲೂ ನಿರತರಾಗಿರುವುದು ಹೇಗೆ.? ಏಕೆ.?

ಸಧ್ಯ ಸಾಕು..ಪ್ರಶ್ನೆಯೊಡನೆ ಆರಂಭಿಸಿದೆ ಈ ಮೊದಲ ನನ್ನ ಬ್ಲಾಗ್ ಬರಹವನ್ನು. ಪ್ರಶ್ನೆಗಳ ಜೊತೆಯೇ ನಿಲ್ಲಿಸುತ್ತಿದ್ದೇನೆ.
ಉತ್ತರ ಹುಡುಕುವ..!!??

ಜೊತೆಗೆ ಅಭಿಪ್ರಾಯಿಸಿ..

ನಿಮ್ಮವ
-ಪ್ರಸನ್ನಕುಮಾರ್ ಕೆರಗೋಡು


Tuesday, 5 December 2017

ಆತ್ಮೀಯರೆ.

ಎಲ್ಲರನ್ನೂ ಅದರಲ್ಲು ಯುವಜನರನ್ನು ಹೆಚ್ಚೆಚ್ಚು ಸಂವಾದಿಸುವ ಮತ್ತು ಅವರನ್ನು ತಲುಪುವ ಕಾರಣದಿಂದ "KRIYA" ಎನ್ನುವ ಹೆಸರಿನಲ್ಲಿ ಒಂದು ಬ್ಲಾಗ್ ತೆರೆದು ಬರೆಯಲು ಪ್ರಾರಂಬಿಸಿದ್ದೇನೆ.
ಸಾಹಿತ್ಯ, ಸಂಸ್ಕೃತಿ, ಕಲೆ, ಶಿಕ್ಷಣ, ಉದ್ಯೋಗ ಮಾರ್ಗದರ್ಶನ, ವ್ಯಕ್ತಿತ್ವ ವಿಕಸನ, ಜೀವನ ಕೌಶಲ, ಉದ್ಯೋಗ ಕೌಶಲ, ಪ್ರಚಲಿತ ವಿದ್ಯಮಾನಗಳು ಮುಂತಾದ ವಿಷಯಗಳ ಮೇಲೆ ಬ್ಲಾಗ್ ನಲ್ಲಿ ಚರ್ಚಿಸುವ ಇರಾದೆ ಹೊಂದಿದ್ದೇನೆ.

ಭೇಟಿ ನೀಡುತ್ತಿರಿ, ಸಲಹೆ ನೀಡುತ್ತಿರಿ. ಒಂದು ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾಗೋಣ.

Blog Address : Kriya-towardssociety.blogspot.com

           -ಪ್ರಸನ್ನಕುಮಾರ್ ಕೆರಗೋಡು

 "ಮುಟ್ಟಿನ ಕಪ್, ಮಹಿಳಾ ಆರೋಗ್ಯ ಮತ್ತು ಪರಿಸರ ಸಂರಕ್ಷಣೆ" ಪರಿಸರ ದಿನದ ಪ್ರಯುಕ್ತ ಈ ಬಾರಿ ಕ್ರಿಯಾ ವತಿಯಿಂದ ಸಾಂಪ್ರದಾಯಿಕ ನೆಲೆಯಿಂದ ವಿಭಿನ್ನ ಪರಿಸರ ಚಟು...